Published in Vijay Karnataka 4th October 2026
“ನಾಳೆ ನನಗೆ ಬಹಳ ಮುಖ್ಯವಾದ ಮೀಟಿಂಗ್ ಇದೆ. ಆದರೆ ನಾನು ಇಲ್ಲಿದ್ದೇನೆ ನೋಡಿ!” ಎಂದರು ಒಬ್ಬರು. “ಇದು ಬಜೆಟ್ ತಿಂಗಳು. ಹಣಕಾಸು ವರ್ಷದ ಕೊನೆಯ ದಿನಗಳಿವು. ಆದರೆ, ನಾನಾದರೋ ಇಲ್ಲಿ ಏನು ಮಾಡುತ್ತಿದ್ದೇನೆ?” ಎಂದರು ಇನ್ನೊಬ್ಬರು.
ಫೆಬ್ರುವರಿ 2024ರಲ್ಲಿ ನಮ್ಮ ಕಟ್ಟಡದಲ್ಲಿರುವ ಎರಡು ಜೋಡಿಗಳು ಐಸ್‌ಲ್ಯಾಂಡ್‌ನ ಜೀಪ್ ಸಫಾರಿಯಿಂದ ಹಿಂದಿರುಗಿದರು. ಅವರು ಕ್ಲಿಕ್ಕಿಸಿಕೊಂಡು ಬಂದಿದ್ದ ಛಾಯಾಚಿತ್ರಗಳನ್ನು ನೋಡುತ್ತಿದ್ದಂತೆಯೇ ಒಂದು ಆಲೋಚನೆ ಹೊಳೆಯಿತು. ನಾವೂ ಒಂದು ದೊಡ್ಡ ಗುಂಪು ಮಾಡಿಕೊಂಡು, ನಮ್ಮಲ್ಲಿ ಯಾರೂ ಈ ಹಿಂದೆ ನೋಡಿರದ ಯಾವುದಾದರೂ ಸ್ಥಳವೊಂದಕ್ಕೆ ಜೀಪ್ ಸಫಾರಿಗೆ ಹೋಗಬಾರದೇ?- ಎಂದು. ಕೊನೆಗೆ, 2025ರ ಫೆಬ್ರುವರಿಯಲ್ಲಿ ಮೊರೊಕ್ಕೊಗೆ ಹೋಗುವುದೆಂದು ನಿರ್ಧರಿಸಿದೆವು. ಸುಧೀರ್ ಮತ್ತು ಸ್ನೇಹಿತರು ವಾಟ್ಸ್ಆಪ್‌ನಲ್ಲಿ ತಮ್ಮ ಪಾಡಿಗೆ ತಾವು ಪ್ರವಾಸದ ಯೋಜನೆ ರೂಪಿಸುತ್ತಿದ್ದರೆ, ಉಳಿದವರೆಲ್ಲಾ ಕನಸು ಕಾಣತೊಡಗಿದ್ದೆವು. ಐದು ಜೋಡಿಗಳು, ಅಂದರೆ, ನಾವು ಹತ್ತು ಜನರುÀ, ಹನ್ನೆರಡರಿಂದ ಹದಿನಾಲ್ಕು ದಿನಗಳ ಪ್ರವಾಸಕ್ಕೆ ತಯಾರಾದೆವು.
2025ರ ಜನವರಿ ಬಂತು. ಅದರ ಜತೆಗೆ ಉದ್ವೇಗವೂ ಬಂತು. ಅಯ್ಯೋ ದೇವರೇ! ನಮ್ಮ ಪಾಲಿಗೆ ಫೆಬ್ರವರಿ ಎಂದರೆ ವರ್ಷದ ಅತ್ಯಂತ ಬಿಡುವಿಲ್ಲದ ತಿಂಗಳುಗಳಲ್ಲಿ ಒಂದು. ಅಂಥ ತಿಂಗಳಲ್ಲಿ ಹದಿನೈದು ದಿನಗಳ ಕಾಲ ನಾನು ದೂರ ಇರಬೇಕಿತ್ತು. ಅದೂ ಕೆಲಸಕ್ಕಾಗಿ ಅಲ್ಲ, ಮೋಜಿಗಾಗಿ! ಇದು ಹೇಗೆ ಸಾಧ್ಯ? ಹೀಗಾಗಿ, ಜನವರಿ ಮುಗಿಯುವುದರೊಳಗೆ ನನ್ನ ಜವಾಬ್ದಾರಿಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ಮುಗಿಸಿಬಿಡಲು ನಾನು ತರಾತುರಿಯಲ್ಲಿ ತೊಡಗಿಸಿಕೊಂಡೆ. ಕಚೇರಿಯ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ವ್ಯಾನ್‌ನಲ್ಲಿ ಮೇಜು ಇಟ್ಟುಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಸ್ನೇಹಿತರೊಂದಿಗೆ ಜೀಪ್ ಸಫಾರಿಗೆ ಹೋಗುವಾಗ ಕೆಲಸದ ಮಾತೇ ಇರಬಾರದು. ಆದರೂ ಒಂದು ಸಮಾಧಾನದ ಸಂಗತಿಯಿತ್ತು. ಅದೇನೆಂದರೆ, ಮೊರೊಕ್ಕೊದ ಸಮಯ ಭಾರತಕ್ಕಿಂತ ನಾಲ್ಕೂವರೆ ಗಂಟೆ ಹಿಂದಿದ್ದು, ಬೆಳಿಗ್ಗೆ ಬೇಗ ಎದ್ದು ಬಾಕಿ ಉಳಿದಿರುವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದುಕೊಂಡೆ.- ಯಾವುದನ್ನು ಮಾಡಲೇಬೇಕೋ ಅದನ್ನು ಸಂತೋಷದಿಂದಲೇ ಮಾಡಬೇಕಲ್ಲವೇ.
ಇದರ ಮಧ್ಯೆಯೇ, ಉಳಿದವರೆಲ್ಲ ಕೆಲಸ ಮಾಡುತ್ತಿರುವಾಗ ನಾನು ಮಾತ್ರ ಮೋಜು ಮಾಡಲು ಹೊರಟಿದ್ದೇನೆ ಎಂಬ ತಪ್ಪೆಸಗಿದ ಭಾವನೆ ನನ್ನೊಳಗೆ ನುಸುಳಿ ಕಾಡಲು ಶುರು ಮಾಡಿತು. “ಅದಿರಲಿ, ನಾವೇಕೆ ಈ ಜೀಪ್ ಸಫಾರಿ ಪ್ರವಾಸಕ್ಕೆ ಫೆಬ್ರುವರಿ ತಿಂಗಳನ್ನೇ ಆಯ್ಕೆ ಮಾಡಿಕೊಂಡೆವು?” ಎಂಬ ಪ್ರಶ್ನೆಯೂ ಒಳಗೆ ಸಣ್ಣಗೆ ತಿವಿದಂತೆ ಆಗುತ್ತಿತ್ತು. ಆಗ ಸುನೀಲಾ ನನಗೆ ಒಂದಿಷ್ಟು ಬುದ್ಧಿಮಾತು ಹೇಳಿದಳು: “ಈಗ ಹೇಗೂ ಹೊರಟಾಗಿದೆ. ಅಂದಮೇಲೆ ಖುಷಿ ಖುಷಿಯಾಗಿ ಹೋಗಿ. ನಮಗೆ ಎಲ್ಲಾ ತಿಂಗಳಲ್ಲೂ ಏನಾದರೊಂದು ಕೆಲಸದ ಒತ್ತಡ ಇದ್ದೇ ಇರುತ್ತದೆ. ಪ್ರವಾಸವನ್ನು ಹೇಗೆ ಖುಷಿಯಿಂದ ಆನಂದಿಸಬೇಕು ಎಂದು ಮಹಿಳಾ ವಿಶೇಷ ಪ್ರವಾಸಗಳಿಗೆ ಬರುವ ಅತಿಥಿಗಳಿಗೆ ಏನೆಲ್ಲಾ ಹೇಳುತ್ತೀರೋ ಈಗ ಅದನ್ನೇ ನೀವೂ ಮಾಡಿ” ಎಂದಳು. ಸರಿ, ಬುಕಿಂಗ್ ಆಯಿತು; ಹಣ ಪಾವತಿಯೂ ಆಯಿತು; ಹೊರಟಿದ್ದವರಿಗೆಲ್ಲಾ ಪ್ರವಾಸದ ಉತ್ಸಾಹ ದಿನೇ ದಿನೇ ಹೆಚ್ಚಾಯಿತು. ಇನ್ನು ಮೀನ ಮೇಷ ಎಣಿಸುವ ಪ್ರಶ್ನೆಯೇ ಇರಲಿಲ್ಲ. ‘ಹೋಗೋಣ... ಖುಷಿಯಾಗಿ, ಪ್ರವಾಸ ಆನಂದಿಸೋಣ!’ ಎಂಬುದೊಂದೇ ಭಾವ.
ವಿಮಾನವೇರಿದ ನಾವು ಕಾಸಾಬ್ಲಾಂಕಾದಲ್ಲಿ ಇಳಿದೆವು. ಸಫಾರಿ ಶುರುವಿಗೂ ಮುನ್ನ ಬಲೂನ್ ಸವಾರಿ, ಫೆಜ್ ಸೇರಿದಂತೆ ಇನ್ನೂ ಹಲವು ಅನುಭವಗಳನ್ನು ನಮ್ಮದಾಗಿಸಿಕೊಂಡೆವು. ಫೆಜ್‌ಗೆ ಮೂರು ಗಂಟೆಗಳ ಕಾರು ಪ್ರಯಾಣದ ವೇಳೆ ಹರಟೆ ಹೊಡೆಯಲು ಶುರು ಮಾಡಿದೆವು. ಪ್ರವಾಸೋದ್ಯಮ ಕ್ಷೇತ್ರದಲ್ಲಿದ್ದ ನಮ್ಮನ್ನು ಹೊರತುಪಡಿಸಿದರೆ ಗುಂಪಿನಲ್ಲಿದ್ದ ಉಳಿದವರೆಲ್ಲಾ ಪಕ್ಕಾ ಹಣಕಾಸು ಕ್ಷೇತ್ರದವರಾಗಿದ್ದರು. ಹರಟೆಯ ಮಧ್ಯೆಯೇ ಶುರುವಾಯಿತು ನೋಡಿ ಕೊರಗು; “ನಾಳೆ ನನಗೆ ಬಹಳ ಮುಖ್ಯವಾದ ಮೀಟಿಂಗ್ ಇದೆ. ಆದರೆ ನಾನು ಇಲ್ಲಿದ್ದೇನೆ ನೋಡಿ!” ಎಂದರು ಒಬ್ಬರು, “ಇದು ಬಜೆಟ್ ತಿಂಗಳು. ಹಣಕಾಸು ವರ್ಷದ ಕೊನೆಯ ದಿನಗಳಿವು. ಆದರೆ, ನಾನಾದರೋ ಇಲ್ಲಿ ಏನು ಮಾಡುತ್ತಿದ್ದೇನೆ?” ಎಂದರು ಇನ್ನೊಬ್ಬರು. “ಛೇ, ಹೊರಡುವ ತಿಂಗಳನ್ನೇ ತಪ್ಪಾಗಿ ಆಯ್ಕೆ ಮಾಡಿಕೊಂಡುಬಿಟ್ಟೆವು. ಪ್ರವಾಸದಲ್ಲಿದ್ದರೂ ಎಷ್ಟೊಂದು ಕಾಲ್‌ಗಳಿಗೆ ಉತ್ತರ ಕೊಡಬೇಕು!” ಎಂದರು ಮೂರನೆಯವರು. (ನಮ್ಮದು ತಮಿಳು-ಮಹಾರಾಷ್ಟ್ರ ಮೂಲದವರಿದ್ದ ಮಿಶ್ರ ಗುಂಪು. ಹೀಗಾಗಿ, ಮಾತುಕತೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆದಿತ್ತು)
ಹೌದು, ಫೆಬ್ರುವರಿ ತಿಂಗಳ ಪ್ರವಾಸ ನಮ್ಮೆಲ್ಲರ ಪಾಲಿಗೂ ತಪ್ಪು ಆಯ್ಕೆಯಾಗಿತ್ತು ಎಂಬುದು ಆಗ ನಮಗೆ ಅರ್ಥವಾಯಿತು. ಅದು ಬರೋಬ್ಬರಿ ತಪ್ಪು ಸಮಯವಾಗಿತ್ತು! ಹೀಗಿದ್ದಾಗಲೂ, ‘ಒತ್ತಡದಲ್ಲಿರುವುದು ನಾನು ಮಾತ್ರವೇ ಅಲ್ಲ!’ ಎಂಬುದನ್ನು ಕಂಡು ನನಗೆ ಕೊಂಚ ಖುಷಿಯೂ ಆಗಿತ್ತು. ಮನುಷ್ಯನ ಮನಸ್ಸೇ ಹಾಗೆ ನೋಡಿ. ನಮ್ಮ ಗುಂಪಿನಲ್ಲಿದ್ದ ಉಳಿದವರು ದೊಡ್ಡ ದೊಡ್ಡ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದವರು. ಮಧ್ಯಮ ಗಾತ್ರದ ಪ್ರವಾಸೋದ್ಯಮ ಸಂಸ್ಥೆ ನಡೆಸುವ ನಾವು ನಮ್ಮ ತಂಡಗಳಿಗೆ ತರಬೇತಿ ನೀಡುವಾಗ ಕರಾರುವಾಕ್ಕಾಗಿ ಯೋಜನೆ ರೂಪಿಸುವ ಮಹತ್ವದ ಬಗ್ಗೆ ಸದಾ ಲೆಕ್ಕರ್ ಕೊಡುತ್ತೇವೆ. ಆದರೆ, ಸ್ವತಃ ಯಾವುದನ್ನು ಅನುಸರಿಸುವುದಿಲ್ಲವೋ ಅದನ್ನೇ ಬೇರೆಯವರಿಗೆ ಬೋಧನೆ ಮಾಡುತ್ತೇವಲ್ಲಾ?- ಎಂದು ನಮ್ಮನ್ನೇ ನಾವು ಕೇಳಿಕೊಳ್ಳುವ ಪರಿಸ್ಥಿತಿ ನಮ್ಮದಾಗಿತ್ತು. ಇಷ್ಟೆಲ್ಲಾ ಯೋಜನೆ ಮಾಡಿಕೊಳ್ಳುವಾಗ, “ಫೆಬ್ರುವರಿ ನಮಗೆ ಪ್ರವಾಸಕ್ಕೆ ಸೂಕ್ತ ಸಮಯವೇ?” ಎಂಬ ಸರಳ ಪ್ರಶ್ನೆಯೊಂದನ್ನು ನಾವು ಒಮ್ಮೆಯೂ ಕೇಳಿಕೊಂಡಿರಲಿಲ್ಲ.
ಪ್ರವಾಸ ಆರಂಭವಾಗಿಬಿಟ್ಟಿತ್ತು. ಹೀಗಾಗಿ, ಈಗ ಮಾಡಬೇಕಾದ ಬುದ್ಧಿವಂತಿಕೆಯ ಕೆಲಸವೆಂದರೆ ಅದನ್ನು ಆನಂದಿಸುವುದಷ್ಟೇ ಆಗಿತ್ತು. ಆದರೆ, ಮುಂದಿನ ಬಾರಿಯ ಪ್ರವಾಸಕ್ಕೆ ಯಾವ ತಿಂಗಳು ಎಲ್ಲರಿಗೂ ಸೂಕ್ತವಾಗಬಹುದು ಎಂಬ ಪ್ರಶ್ನೆಯನ್ನು ನಾವು ಅಲ್ಲೇ ಪರಸ್ಪರ ಕೇಳಿಕೊಳ್ಳಲು ಶುರು ಮಾಡಿದೆವು. ಸಾಕಷ್ಟು ಚರ್ಚೆ ನಡೆಸಿ, ಜೂನ್ ತಿಂಗಳೆAದು ನಿಶ್ಚಯಿಸಿ ನೆಮ್ಮದಿಯ ನಿಟ್ಟುಸಿರುಬಿಟ್ಟೆವು. ಈಗಿನ ಪ್ರವಾಸಕ್ಕೆ ಫೆಬ್ರುವರಿ ತಿಂಗಳ ಆಯ್ಕೆ ನಾವೆಲ್ಲರೂ ಸೇರಿ ಮಾಡಿದ ತಪ್ಪು ನಿರ್ಧಾರವಾಗಿತ್ತು. ಮುಂದಿನ ಬಾರಿ ಮುಂಚಿತವಾಗಿಯೇ ಸೂಕ್ತ ತಿಂಗಳನ್ನು ನಿರ್ಧರಿಸದಿದ್ದರೆ, ಅದೇ ತಪ್ಪು ಪುನರಾವರ್ತನೆ ಆಗಬಹುದು. ತಪ್ಪುಗಳಿಂದ ಕಲಿಯುವುದು, ಅದೇ ತಪ್ಪನ್ನು ಮತ್ತೆ ಮಾಡದಿರುವುದು ಹಾಗೂ ಮತ್ತೊಬ್ಬರು ಅದೇ ತಪ್ಪು ಮಾಡದಿರಲೆಂದು ನಾವು ಕಲಿತ ಪಾಠವನ್ನು ಹಂಚಿಕೊಳ್ಳುವುದು- ಒತ್ತಡರಹಿತ ಕೆಲಸದ ಸಂಸ್ಕೃತಿಯ ಮಹಾಮಂತ್ರ ಇದೇ ಆಗಿದೆ.
ಲಂಡನ್‌ನಲ್ಲಿರುವ ನಮ್ಮ ಸಹವರ್ತಿಯೊಬ್ಬರು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ನಮ್ಮನ್ನು ಭೇಟಿಯಾಗಲೆಂದು ಬರುತ್ತಾರೆ. ಒಂದು ಸಲ ನಾನು ಅವರನ್ನು, “ನಿಮ್ಮ ವ್ಯವಹಾರ ಚೆನ್ನಾಗಿಯೇ ನಡೆಯುತ್ತಿದೆ. ನಾವು ಕೂಡ ಕೆಲವು ತಿಂಗಳಿಗೊಮ್ಮೆ ಜೂಮ್‌ನಲ್ಲಿ ಸಾಕಷ್ಟು ಮಾತುಕತೆ ನಡೆಸುತ್ತಲೇ ಇರುತ್ತೇವೆ. ಹೀಗಿರುವಾಗ ನೀವು ಇಲ್ಲಿಗೆ ಬರುವ ಶ್ರಮ ಏಕೆ ತೆಗೆದುಕೊಳ್ಳುತ್ತೀರಿ?”- ಎಂದು ಕೇಳಿದೆ. ಸಮಯ ಉಳಿಸುವುದನ್ನೇ ಬಹಳ ಮುಖ್ಯವೆಂದುಕೊಳ್ಳುವ ಹಾಗೂ ಎಲ್ಲವನ್ನೂ ಆನ್‌ಲೈನ್‌ನಲ್ಲೇ ಮಾಡುವುದನ್ನು ವ್ಯಸನವಾಗಿಸಿಕೊಂಡಿರುವ ನನ್ನ ವ್ಯಾಪಾರಿ ಮನಸ್ಸಿನ ಮಾತು ಅದಾಗಿತ್ತು. ಮೇಲಿನಂತೆ ನಾನು ಕೇಳಿದಾಗ, ಅವರು, “ಹೌದು, ಯಾವ ಕೆಲಸವೂ ನಿಲ್ಲದೆ ನಡೆಯುತ್ತಿರುತ್ತದೆ. ಆದರೆ ನಾವು ನಿಮ್ಮನ್ನು ಮುಖಾಮುಖಿಯಾಗಿ ಭೇಟಿಯಾಗಲು ಬಯಸುತ್ತೇವೆ. ಹೀಗೆ ಭೇಟಿಯಾದಾಗ ವ್ಯವಹಾರಕ್ಕೆ ಹೊರತಾದ ವಿಷಯಗಳ ಬಗ್ಗೆ ಮಾತನಾಡಲು ಅವಕಾಶವಾಗುತ್ತದೆ. ಇದರಿಂದ. ಒಬ್ಬರನ್ನೊಬ್ಬರು ಇನ್ನಷ್ಟು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ನಡುವಿನ ಸಂಬAಧ ಇನ್ನಷ್ಟು ಗಟ್ಟಿಯಾಗುತ್ತದೆ” ಎಂದರು. ಅವರು, ಹೇಳಿದ್ದು ನಿಜ. ಮಾತುಕತೆಯಿಂದ ಬಹಳಷ್ಟನ್ನು ಸಾಧಿಸಬಹುದು. ಆದರೆ ಮುಖಾಮುಖಿಯಾಗಿ ಭೇಟಿಯಾಗುವುದರಿಂದ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಬಹುದು. ಎಲ್ಲವೂ ಆನ್‌ಲೈನ್ ಆಗುತ್ತಿರುವ ಈ ಕಾಲದಲ್ಲಿ, ಒಬ್ಬರು ಮತ್ತೊಬ್ಬರನ್ನು ಖುದ್ದು ಭೇಟಿಯಾಗಬೇಕೆಂಬ ಹಂಬಲ ಹಾಗೂ ಅದರ ಅಗತ್ಯ ಕೂಡ ಹೆಚ್ಚಾಗುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.
ನಮ್ಮ ಸಣ್ಣ ಪ್ರವಾಸ ಬ್ರ್ಯಾಂಡ್ ‘’ಗ್ರ್ಯಾಂಡ್‌ಪೇರೆಂಟ್ಸ್ ಗ್ರ್ಯಾಂಡ್ ಚಿಲ್ಡ್ರನ್”, ಮೊಮ್ಮಕ್ಕಳು ಅಜ್ಜ-ಅಜ್ಜಿಯರ ಜತೆ ಪ್ರವಾಸ ಕೈಗೊಳ್ಳುವ ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿದೆ. ‘ವೀಣಾ ವರ್ಲ್ಡ್’ ಆರಂಭವಾದ ಶುರುವಿನಲ್ಲಿ ನಾವು ಇದನ್ನು ಹೊಸ ರೂಪದಲ್ಲಿ ಆರಂಭಿಸಿದ್ದೆವು. ಆಗ ಈ ಪ್ರವಾಸಗಳಲ್ಲಿ ನಾನೂ ಪ್ರಯಾಣಿಸಿದ್ದೆ. ಈಗ ಮತ್ತೆ ಅದಕ್ಕೆ ಹೊಸ ಚೈತನ್ಯ ನೀಡುತ್ತಿದ್ದೇವೆ. ಇದರಲ್ಲಿ, ಅಜ್ಜ-ಅಜ್ಜಿಯರು ಮತ್ತು ಮೊಮ್ಮಕ್ಕಳು ಒಟ್ಟಾಗಿ ಪ್ರವಾಸ ಮಾಡುತ್ತಾರೆ. (ತಂದೆ-ತಾಯಿಗೆ ಪ್ರವೇಶವಿರುವುದಿಲ್ಲ!) ಹರಟೆ, ನಗು, ಡಾನ್ಸ್ ಹೀಗೆ ಮನಸಾರೆ ಆನಂದಿಸುತ್ತಾ ಪ್ರವಾಸ ಸಮಯವನ್ನು ಕಳೆಯುತ್ತಾರೆ.
ಈಗ ಅದೆಷ್ಟೋ ಕುಟುಂಬಗಳಲ್ಲಿ ಭವಿಷ್ಯದ ಕುಡಿಗಳು ಯೂರೊಪ್, ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ನೆಲೆಸಿ ಜಾಗತಿಕ ಪ್ರಜೆಗಳಾಗಿಬಿಟ್ಟಿದ್ದಾರೆ. ಗಡಿಗಳು ಮಸುಕಾಗುತ್ತಿರುವುದು ಒಳ್ಳೆಯದೇ. ಆದರೆ, ಮನುಷ್ಯರ ನಡುವಿನ ಅಂತರ ಮಾತ್ರ ಹೆಚ್ಚಾಗಿಬಿಟ್ಟಿದೆ. ಪರಸ್ಪರ ಮುಖಾಮುಖಿಯಾಗಿ ಭೇಟಿಯಾಗುವುದು ಮೊದಲಿಗಿಂತಲೂ ಕಷ್ಟವಾಗಿದೆ. ಅದರಲ್ಲೂ, ಅಜ್ಜ-ಅಜ್ಜಿಯರು ಮತ್ತು ಮೊಮ್ಮಕ್ಕಳ ನಡುವಿನ ಬಾಂಧವ್ಯ ಗಟ್ಟಿಯಾಗಬೇಕಾದ ಜರೂರಿರುವಾಗ, ಅದು ನಿಧಾನವಾಗಿ ಸಡಿಲವಾಗುತ್ತಿದೆ. ಪ್ರವಾಸದ ಮೂಲಕ ಕುಟುಂಬಗಳನ್ನು ನೋಡುವಾಗ ನಾವು ಯಾವಾಗಲೂ ಒಂದು ಪ್ರಶ್ನೆ ಕೇಳಿಕೊಳ್ಳುತ್ತೇವೆ- “ಇದರಿಂದ ನಾನು ಕಲಿಯುವುದೇನಿದೆ?” ಅಥವಾ ‘ವೀಣಾ ವರ್ಲ್ಡ್’ ಕಲಿಯುವಂಥದ್ದು ಏನಿದೆ?” ಈ ದೃಷ್ಟಿಕೋನದಿಂದ ನೋಡಿದ ಕಾರಣದಿಂದಲೇ, “ಪ್ರತಿಯೊಂದು ಕುಟುಂಬಕ್ಕಾಗಿ, ಕುಟುಂಬದ ಪ್ರತಿಯೊಬ್ಬರಿಗಾಗಿ” ಎಂಬ ನಮ್ಮ ಧ್ಯೇಯವಾಕ್ಯ ರೂಪು ತಳೆದಿದೆ.
ಅಜ್ಜ-ಅಜ್ಜಿ ಮುಂಬೈನಲ್ಲಿದ್ದು, ಮೊಮ್ಮಕ್ಕಳು ಲಂಡನ್ ಅಥವಾ ನ್ಯೂಯಾರ್ಕ್ ನಲ್ಲಿದ್ದರೆ ಏನು ಮಾಡಬೇಕು?; ಅವರು ದುಬೈನಲ್ಲಿ ಭೇಟಿಯಾಗಲಿ. ಕುಟುಂಬ ಕ್ಯಾಲಿಫೋರ್ನಿಯಾದಲ್ಲಿದ್ದರೆ, ಜಪಾನ್ ಅಥವಾ ಸಿಂಗಾಪುರದಲ್ಲಿ ಒಟ್ಟಾಗಲಿ. ಅಷ್ಟೇ ಅಲ್ಲ, ಭವಿಷ್ಯದ ಪೀಳಿಗೆಯವರಿಗೆ ‘ಇನ್ ಕ್ರೆಡಿಬಲ್ ಇಂಡಿಯಾ’ ತೋರಿಸುವುದು ಕೂಡ ನಮ್ಮ ಕರ್ತವ್ಯ- ಪ್ರತಿ ಕ್ರಿಸ್‌ಮಸ್ ರಜೆಯಲ್ಲಿ ಭಾರತದ ಒಂದೊAದು ಹೊಸ ರಾಜ್ಯವನ್ನು ತೋರಿಸಬಹುದು. ಬೇರೆ ದೇಶಗಳಲ್ಲಿ ಯಾವುದನ್ನೆಲ್ಲಾ ತುಣುಕು ತುಣುಕಾಗಿ ನೋಡಬಹುದೋ ಆ ಎಲ್ಲಾ ನಿಸರ್ಗ ಸಿರಿಯು ಭಾರತದ ನೆಲದಲ್ಲಿ ಒಟ್ಟಾಗಿ ಪೋಣಿಸಿದಂತಿದೆ- ಹಿಮಾಲಯದ ಮಂಜು ಮುಸುಕಿದ ಶಿಖರ ರಾಜಸ್ಥಾನದ ಮರುಭೂಮಿ, ವರ್ಷಪೂರ್ತಿ ಹರಿಯುವ ನದಿಗಳು, ದಿಯು ಮತ್ತು ದಮನ್‌ನಿಂದ ದಿಘಾವರೆಗೆ ಹರಡಿರುವ ಉದ್ದಕ್ಕೂ ಚಾಚಿಕೊಂಡಿರುವ ಕರಾವಳಿ, ಕಾಫಿ, ಚಹಾ, ಸಾಂಬಾರ ಪದಾರ್ಥಗಳು, ದ್ರಾಕ್ಷಿ ತೋಟಗಳು, ನಿಕೋಬಾರ್ ಜನವಸತಿ ನೆಲೆಗಳು, ಬೆಂಗಳೂರಿನ ಐಟಿ ಹಬ್, ಕಲೆ, ಜಾನಪದ ಹಾಗೂ ಪರಂಪರೆ ಹೀಗೆ ಇಲ್ಲಿ ಹುಬ್ಬೇರಿಸುವಷ್ಟು ವೈವಿಧ್ಯವಿದೆ. ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ; ಕುಟುಂಬವಾಗಿ ನಿಮ್ಮ ಕರ್ತವ್ಯವಾಗಿದೆ; ಪ್ರವಾಸೋದ್ಯಮ ವೃತ್ತಿಪರರಾಗಿ ನಮ್ಮ ಕರ್ತವ್ಯವೂ ಆಗಿದೆ.
ಹೋ, ಇದೇನಿದು! ಸಂವಹನದ ಬಗ್ಗೆ ಬರೆಯಲು ಆರಂಭಿಸಿದ ಈ ಲೇಖನ ಕೊಂಚ ಬಿಜೆನೆಸ್ ಸ್ವರೂಪಕ್ಕೆ ಹೊರಳಿಬಿಟ್ಟಿತಲ್ಲ?- ಏನು ಮಾಡುವುದು, ಅಭ್ಯಾಸಬಲ ಸುಲಭಕ್ಕೆ ಬಿಡುವುದಿಲ್ಲ ನೋಡಿ! ಪುನಃ ಮೂಲ ವಿಷಯಕ್ಕೆ ಬರೋಣ- ಪ್ರವಾಸವು ಕುಟುಂಬ ಮತ್ತು ಸ್ನೇಹದ ನಡುವಿನ ಬಾಂಧವ್ಯವನ್ನು ಸದ್ದಿಲ್ಲದಂತೆಯೇ ನಿಧಾನವಾಗಿ ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಮೊರೊಕ್ಕೊ ಪ್ರವಾಸ ನಮಗೆ ಮತ್ತೊಂದು ಪಾಠವನ್ನೂ ಕಲಿಸಿತು. ನಾವು ಎಲ್ಲಿ ಮಾತನಾಡಬೇಕು ಹಾಗೂ ಎಲ್ಲಿ ಮೌನವಾಗಿರಬೇಕು ಎಂಬುದನ್ನು ತಿಳಿದಿರಬೇಕು. ಏಕೆಂದರೆ, ಹಿಂದೆ ಮುಂದೆ ನೋಡದೆ ಮಾತಾಡುವುದರಿಂದ ಆಗುವ ಹಾನಿಯನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ, ಅಗತ್ಯವಿರುವ ಸಂದರ್ಭದಲ್ಲಿ ನಾವು ಮಾತನಾಡುವುದೂ ಅಷ್ಟೇ ಮುಖ್ಯವಾಗುತ್ತದೆ. “ಪ್ರವಾಸ ಹೋಗಲು ಫೆಬ್ರುವರಿ ನಮಗೆ ಸೂಕ್ತವಾದ ಸಮಯವೇ?” ಎಂಬ ಒಂದೇ ಒಂದು ಪ್ರಶ್ನೆ ನಮ್ಮ ಪ್ರವಾಸವನ್ನು ಇನ್ನಷ್ಟು ಸಂತಸಕರವಾಗಿಸುತ್ತಿತ್ತು.
ಇದನ್ನು ಇನ್ನಷ್ಟು ದೊಡ್ಡ ದೃಷ್ಟಿಕೋನದಿಂದ ನೋಡೋಣ. ಯುರೋಪಿನ ದೇಶಗಳು ತಮ್ಮ ಉದ್ದೇಶಗಳ ಬಗ್ಗೆ ಮುಕ್ತವಾಗಿ ಪರಸ್ಪರ ಮಾತನಾಡಿಕೊಂಡಿದ್ದರೆ, ಮೊದಲ ಮಹಾಯುದ್ಧವೇ ನಡೆಯುತ್ತಲೇ ಇರಲಿಲ್ಲ. ಹಾಗಾಗಿದ್ದರೆ ಇಂದು ವಿಶ್ವದ ಇತಿಹಾಸವೂ ಭೌಗೋಳಿಕ ನಕ್ಷೆಯೂ ಬೇರೆಯೇ ಆಗಿರುತ್ತಿತ್ತು (ಕಳೆದ ವರ್ಷ ಅಮೆರಿಕ ಮತ್ತು ಉಕ್ರೇನ್ ನಾಯಕರ ನಡುವಿನ ನಡೆದ ತೀವ್ರ ಮಾತಿನ ಚಕಮಕಿ ಇದಕ್ಕೆ ಅಪವಾದ. ಎಂಬುದು ಬೇರೆ ಮಾತು). ತೆರೆದ ಮನಸ್ಸಿನ ಮತ್ತು ಸಕಾರಾತ್ಮಕ ಸಂವಾದದಿಂದ ಬಹಳಷ್ಟು ಸಾಧಿಸಬಹುದು. ಸ್ಟ್ರಾಟೆಜಿಕ್ ಫೋರ್‌ಸೈಟ್ ಗ್ರೂಪ್ ಮೂಲಕ ಶ್ರೀ ಸಂದೀಪ್ ವಾಸ್ಲೇಕರ್ ಅವರು ಹಲವು ಬಾರಿ ಇದನ್ನು ತೋರಿಸಿಕೊಟ್ಟಿದ್ದಾರೆ.
ವ್ಯಾಪಾರ ವೃತ್ತಿಗೂ ಇದೇ ಮಾತು ಅನ್ವಯಿಸುತ್ತದೆ. ನೋಕಿಯಾ, ಕೊಡ್ಯಾಕ್ ಮತ್ತು ಬ್ಲ್ಯಾಕ್‌ಬೆರಿ ಸಂಸ್ಥೆಗಳು ತಂತ್ರಜ್ಞಾನ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಚರ್ಚಿಸಿದ್ದವೇ? ಮುಂದೇನು ಎಂಬುದರ ಬಗ್ಗೆ ಸಂಸ್ಥೆಯೊಳಗೆ ಮುಕ್ತವಾಗಿ ಚರ್ಚೆ-ಸಮಾಲೋಚನೆ ನಡೆಸಿದ್ದವೇ? ತಮ್ಮ ಕಾಲದ ಅತ್ಯುತ್ತಮ ವೈಜ್ಞಾನಿಕ ಪ್ರತಿಭೆಗಳು ಈ ಸಂಸ್ಥೆಗಳಲ್ಲಿದ್ದರು. ಆದರೂ ಒಂದು ಕಾಲದಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದ ಈ ಸಂಸ್ಥೆಗಳು ತದನಂತರದಲ್ಲಿ ಕಣ್ಮರೆಯಾಗಿಬಿಟ್ಟವು. ಅದಕ್ಕೆ ಹಲವು ಕಾರಣಗಳಿರಬಹುದು. ಆದರೆ, ಸಂವಹನದ ಕೊರತೆಯೂ ಪ್ರಮುಖ ಕಾರಣಗಳಲ್ಲೊಂದು ಎಂಬುದನ್ನು ನಿರಾಕರಿಸಲಾಗದು. 1912ರಲ್ಲಿ ಟೈಟಾನಿಕ್ ಮುಳುಗಿದ ಘಟನೆಯ ಹಿಂದೆಯೂ ಇಂಥದೇ ಒಂದು ಕಾರಣವಿತ್ತು; ಅದೇನೆಂದರೆ, ನೀರ್ಗಲ್ಲಿನ ಅಪಾಯದ ಮುನ್ನೆಚ್ಚರಿಕೆ ಸರಿಯಾದ ಸಮಯಕ್ಕೆ ಹಡಗಿನ ಕ್ಯಾಪ್ಟನ್‌ಗೆ ತಲುಪದಿರುವುದು. ಚೆರ್ನೊಬಿಲ್ ದುರಂತ ಮತ್ತು 9/11 ದಾಳಿಯಂತಹ ಇತ್ತೀಚಿನ ಘಟನೆಗಳಲ್ಲೂ ಮುನ್ನೆಚ್ಚರಿಕೆ ಸರಿಯಾಗಿ ತಲುಪದ ಅಥವಾ ಅದನ್ನು ಕಡೆಗಣಿಸಿದ್ದರ ಪರಿಣಾಮ ಏನೆಂಬುದನ್ನು ನಾವು ಕಂಡಿದ್ದೇವೆ.
ಮುನ್ನೆಚ್ಚರಿಕೆ ಸಿಗುವುದು ಅದೃಷ್ಟದ ಸಂಗತಿ. ಆದರೆ, ಆ ಮುನ್ನೆಚ್ಚರಿಕೆಯನ್ನು ತಕ್ಷಣವೇ ಸರಿಯಾದ ವ್ಯಕ್ತಿಗೆ ಅಥವಾ ಸರಿಯಾದ ಸ್ಥಳಕ್ಕೆ ತಲುಪಿಸುವುದು ಅದಕ್ಕಿಂತ ಮುಖ್ಯವಾದುದು. ಇಲ್ಲವಾದರೆ, ಅಪಾಯದ ಕೆಂಪು ಬಾವುಟ ಹಾರಿಸುವ ಹೊತ್ತಿಗೆ ತುಂಬಾ ತಡವಾಗಿಬಿಟ್ಟಿರುತ್ತದೆ; ಆಗಿಹೋದ ನಷ್ಟವೂ ಅಪಾರವಾಗಿರುತ್ತದೆ. ಹೀಗಾಗಿ ಯುದ್ಧವಿರಬಹುದು, ವ್ಯಾಪಾರ-ವ್ಯವಹಾರ ಇರಬಹುದು, ಸ್ನೇಹ ಸಂಬAಧ ಇರಬಹುದು, ಇಲ್ಲವೇ ಕುಟುಂಬದೊಳಗಿನ ವಿಷಯಗಳಿರಬಹುದು- ಎಚ್ಚರವಾಗಿರೋಣ. ಸಕಾರಾತ್ಮಕವಾಗಿರೋಣ, ಪರಸ್ಪರ ಮಾತಾಡುತ್ತಾ ಇರೋಣ.




































Post your Comment
Please let us know your thoughts on this story by leaving a comment.