Contact Us

Explore Veena World Travel Stories

  • Travel Inspiration
  • Destination Guides
  • Travel Tips

ಅದು ಅಷ್ಟು ಸುಲಭವಲ್ಲ!

5 mins. read
Veena Patil
Veena Patil
5 Mins Read
November 20, 2026
November 20, 2026

Quick Summary

ಮನೆಗೆ ಪೋಸ್ಟರ್ ಅಂಟಿಸಿ ಮೂಗು ಸರಿಯಾದ ಜಾಗಕ್ಕೆ ಅಂಟಿಸುವ ಆಟವನ್ನು ಕುಟುಂಬದೊಂದಿಗೆ ಆಡಿರಿ.

ಕಣ್ಣಿಗೆ ಬಟ್ಟೆ ಕಟ್ಟುವ ಮೊದಲು ದೂರ ಮತ್ತು ಜಾಗವನ್ನು ಅಂದಾಜು ಮಾಡಿಕೊಳ್ಳಿ, ಆದರೆ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ.

ಧ್ವನಿಯನ್ನು ಆಧರಿಸಿ ನಿಧಾನವಾಗಿ ಹೆಜ್ಜೆ ಹಾಕಿ, ಮಧ್ಯದಲ್ಲಿ ಕುಟುಂಬದವರು ನೀಡುವ ಸುಳಿವುಗಳನ್ನು ಗಮನಿಸಿ.

ಆಟದ ವೇಳೆ ಮೂಗು ತಪ್ಪಾಗಿ ಅಂಟಾದರೂ ನಗುತ್ತಾ ಸರಿಪಡಿಸಿ, ಇದು ಅನುಭವವನ್ನು ಇನ್ನಷ್ಟು ತಮಾಷೆಯಾಗಿಸುತ್ತದೆ.

ಈ ಆಟವನ್ನು ‘ಪಿನ್ ದಿ ನೋಸ್’ ಎಂದು ಕರೆಯಬಹುದು, ಆದರೆ ಮನೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಿ ಜೀವಂತವಾಗಿರಿಸಿ.

ಹಿಂದಿನ ‘ಕತ್ತೆಗೆ ಬಾಲ ಅಂಟಿಸುವ ಆಟ’ ಮತ್ತು ‘ಕಣ್ಣಾಮುಚ್ಚಾಲೆ’ ನೆನಪಿಸಿಕೊಂಡು, ಕಣ್ಣು ಮುಚ್ಚಿ ಮನಸ್ಸನ್ನು ಶಾಂತಗೊಳಿಸುವ ಅಭ್ಯಾಸವನ್ನೂ ಪ್ರಯತ್ನಿಸಿ.

Published in Vijay Karnataka 22nd November 2026

...ನನ್ನ ಎತ್ತರವನ್ನು ಆಧರಿಸಿ ಪೋಸ್ಟರ್ ಎಷ್ಟು ದೂರದಲ್ಲಿದೆ, ಅದರಲ್ಲಿ ಮೂಗು ಎಲ್ಲಿ ಬರುತ್ತದೆ ಎಂಬುದನ್ನೂ ಅಂದಾಜು ಹಾಕಿಕೊಂಡಿದ್ದೆ. ಆಟ ಬಹಳ ಸುಲಭವೆಂದೇ ಅನ್ನಿಸಿತು...

 

"ಈ ಪೋಸ್ಟರ್ ಅನ್ನು ಬಾಗಿಲಿಗೆ ಏಕೆ ಅಂಟಿಸಿದ್ದೀರಿ?" ಎಂದು ನಾನು ಕೇಳಿದೆ. "ಅಮ್ಮಾ, ಇದೊಂದು ಆಟ. ಬನ್ನಿ, ಆಡೋಣ!" ಎಂದು ಕಣ್ಣಿಗೆ ಕಟ್ಟುವ ಬಟ್ಟೆಯನ್ನು ತರುತ್ತಾ ಹೇತಾ ಹೇಳಿದಳು. ಅವಳು ಸಾರಾಳ ಕಣ್ಣಿಗೆ ಬಟ್ಟೆ ಕಟ್ಟಿ, ಕೈಗೆ ಒಂದು ಸ್ಟಿಕ್ಕರ್ ಕೊಟ್ಟು, ಅವಳನ್ನು ಸುತ್ತಲೂ ತಿರುಗಿಸಿ, "ಈಗ ಹೋಗಿ ಪೋಸ್ಟರ್‌ನ ಮೇಲೆ ಸರಿಯಾದ ಜಾಗಕ್ಕೆ ಇದನ್ನು ಅಂಟಿಸು" ಎಂದಳು. ಸಾರಾಳಿಗೆ ತಲೆ ಸುತ್ತಿದಂತಾಗಿ ಯಾವ ದಿಕ್ಕಿನಲ್ಲಿ ಹೋಗಬೇಕೆಂಬುದೇ ತಿಳಿಯಲಿಲ್ಲ. ಆದರೂ ನಮ್ಮ ಧ್ವನಿಯನ್ನು ಆಧರಿಸಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಪೋಸ್ಟರ್ ಹತ್ತಿರಕ್ಕೆ ಬಂದು ಹೆಚ್ಚುಕಡಿಮೆ ಸರಿಯಾದ ಜಾಗಕ್ಕೇ ಸ್ಟಿಕ್ಕರ್ ಅಂಟಿಸಿದಳು. ಆಮೇಲೆ ಮನೆಯವರೆಲ್ಲರೂ ಒಬ್ಬರ ನಂತರ ಒಬ್ಬರಂತೆ ಈ ಆಟ ಮುಂದುವರಿಸಿ ಹೊಟ್ಟೆ ಹುಣ್ಣಾಗುವಂತೆ ನಕ್ಕೆವು.

ನನ್ನ ಸರದಿ ಬಂದಾಗಲಂತೂ ಎಲ್ಲಕ್ಕಿಂತ ಮಜವಾಗಿತ್ತು. ಆಗಲೇ ಇಬ್ಬರು ಆಟಗಾರರು ಆಡುವುದನ್ನು ನೋಡಿದ್ದರಿಂದ ನಾನು ಸುಲಭವಾಗಿ ಆಡಬಹುದೆಂಬ ವಿಶ್ವಾಸದಲ್ಲಿದ್ದೆ. ನನ್ನ ಎತ್ತರವನ್ನು ಆಧರಿಸಿ ಪೋಸ್ಟರ್ ಎಷ್ಟು ದೂರದಲ್ಲಿದೆ, ಅದರಲ್ಲಿ ಮೂಗು ಎಲ್ಲಿ ಬರುತ್ತದೆ ಎಂಬುದನ್ನೂ ಅಂದಾಜು ಹಾಕಿಕೊಂಡಿದ್ದೆ. ಆಟ ಬಹಳ ಸುಲಭವೆಂದೇ ಅನಿಸಿತು. ಸರಿ, ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಮೂರು ಸುತ್ತು ತಿರುಗಿಸಿದರು. ನಾನು ಲೆಕ್ಕ ಹಾಕಿದ ಪ್ರಕಾರ, ಈಗ ಪೋಸ್ಟರ್‌ಗೆ ಎದುರಾಗಿ ನಿಂತಿರಬೇಕಿತ್ತು. ಎಚ್ಚರಿಕೆಯಿಂದ ಹೆಜ್ಜೆ ಹಾಕಲು ಶುರುಮಾಡಿದೆ. ಅಷ್ಟರಲ್ಲಿ ಸುತ್ತಲೂ ಕಿಸಿಕಿಸಿ ನಗು ಕೇಳಿಸಹತ್ತಿತು. ಅವರ ನಗು ಕೇಳಿ ನಾನು ತಪ್ಪು ದಿಕ್ಕಿನಲ್ಲಿ ಹೋಗುತ್ತಿದ್ದೇನೆಯೇ ಎಂಬ ಅನುಮಾನ ಮೂಡಿತು. ಆದರೂ ಹೆಜ್ಜೆ ಹಾಕುವುದನ್ನು ಮುಂದುವರಿಸಿದೆ. ಮೊದಲು ಕೇಳಿಸುತ್ತಿದ್ದ ಕಿಸಿಕಿಸಿ ನಗು ಜೋರಾದ ನಗೆಯಾಗಿ ಬದಲಾಯಿತು. "ನೀಲ್, ಹಾಸಿಗೆಗಳನ್ನು ತಂದುಬಿಡು. ಇವಳು ಪೋಸ್ಟರ್ ತಲುಪುವಷ್ಟರಲ್ಲಿ ಬೆಳಗಾಗುತ್ತದೆ!"; "ವೀಣಾ, ನಮ್ಮ ಧ್ವನಿ ಯಾವ ಕಡೆಯಿಂದ ಬರುತ್ತಿದೆ ಎಂಬುದೂ ಗೊತ್ತಾಗುತ್ತಿಲ್ಲವೇ?"; "ನೀನು ಇಷ್ಟು ಪೆದ್ದಿ ಎಂದು ನಾವು ಅಂದುಕೊಂಡಿರಲೇ ಇಲ್ಲ!"; "ಅಬ್ಬಾ, ಎಷ್ಟು ನಿಧಾನವಾಗಿ ಹೋಗುತ್ತಿದ್ದಾಳೆ!" ಎಂದು ಕಿಚಾಯಿಸುವ ಮಾತುಗಳು ಕೇಳಿಬರತೊಡಗಿದವು. ನನ್ನೆಲ್ಲ ಲೆಕ್ಕಾಚಾರ ತಲೆಕೆಳಗಾಗಿ ಮೊದಲಿನ ಆತ್ಮವಿಶ್ವಾಸ ಮಾಯವಾಗಿಬಿಟ್ಟಿತ್ತು. "ಆಯ್ತು, ನಾನು ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದೇನೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಈಗ ದಯವಿಟ್ಟು ಒಂದು ಸುಳಿವನ್ನಾದರೂ ಕೊಡಿ" ಎಂದು ಕೇಳಿಕೊಂಡೆ.

ನಾನು ಸೋಲನ್ನು ಒಪ್ಪಿಕೊಂಡು ಸಹಾಯ ಕೇಳುತ್ತಿದ್ದಂತೆಯೇ ಕಿಚಾಯಿಸುವ ಮಾತುಗಳು ಗಪ್ಪನೆ ನಿಂತವು. "ಎಡಕ್ಕೆ ತಿರುಗು, ಎರಡು ಹೆಜ್ಜೆ ಮುಂದಕ್ಕೆ ಹೋಗು, ಸ್ವಲ್ಪ ಬಲಕ್ಕೆ ತಿರುಗು, ಈಗ ನೇರವಾಗಿ ನಡೆ. ಇನ್ನೇನು ತಲುಪಿಯೇ ಬಿಟ್ಟೆ. ನಾವಿದ್ದೇವೆ, ಹೆದರಬೇಡ!" ಎಂದು ದಾರಿ ಹೇಳುತ್ತಾ ಪೋಸ್ಟರ್ ಇದ್ದ ಜಾಗ ತಲುಪುವಂತೆ ಮಾಡಿದರು. ಆದರೆ, ಅಷ್ಟರಲ್ಲಾಗಲೇ ನಾನು ಎಷ್ಟು ಗಲಿಬಿಲಿಗೊಂಡಿದ್ದೆ ಎಂದರೆ, ಕಿವಿ ಇರಬೇಕಾದ ಜಾಗಕ್ಕೆ ಮೂಗಿನ ಚಿತ್ರವನ್ನು ಅಂಟಿಸಿಬಿಟ್ಟೆ! ಮುಜುಗರದಿಂದಲೇ ನನ್ನ ಜಾಗಕ್ಕೆ ವಾಪಸ್ಸು ಬಂದು ಕುಳಿತೆ. ಕಣ್ಣು ತೆರೆದಿರುವಾಗ ಕಾಣುವ ಜಗತ್ತಿಗೂ, ಕಣ್ಣು ಮುಚ್ಚಿದಾಗ ಎದುರಾಗುವ ಜಗತ್ತಿಗೂ ಎಷ್ಟೊಂದು ವ್ಯತ್ಯಾಸವಿದೆ ಎಂಬುದನ್ನು ಈ ಪುಟ್ಟ ಆಟವು ನನಗೆ ತೋರಿಸಿಕೊಟ್ಟಿತು.

ತಮಾಷೆಯೆಂದರೆ, ಬಹುತೇಕ ಎಲ್ಲರಿಗೂ ಇದೇ ರೀತಿಯ ಅನುಭವವಾಯಿತು. "ಇದೇನು ಮಹಾ! ನಾನು ಹೇಗೆ ಮಾಡುತ್ತೇನೆ ನೋಡಿ" ಎಂದೇ ಆರಂಭದಲ್ಲಿ ಪ್ರತಿಯೊಬ್ಬರೂ ಹೇಳುತ್ತಿದ್ದರು. ಆದರೆ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚುವಾಗ, ‘ಇದು ನಾವು ಅಂದುಕೊAಡಷ್ಟು ಸುಲಭವಲ್ಲ’ ಎಂದು ಎಂದುಕೊಳ್ಳುತ್ತಿದ್ದಾರೆಂಬುದು ಅವರ ಮುಖದಲ್ಲೇ ಎದ್ದು ಕಾಣುತ್ತಿತ್ತು. ನಾವು ಈ ಆಟಕ್ಕೆ 'ಪಿನ್ ದಿ ನೋಸ್' (ಮೂಗನ್ನು ಸರಿಯಾದ ಜಾಗದಲ್ಲಿ ಅಂಟಿಸುವ ಆಟ) ಎಂಬ ಇಂಗ್ಲಿಷ್ ಹೆಸರಿಟ್ಟಿದ್ದೆವು.  ಅಂದಹಾಗೆ, ಈಗ ನಾವೆಲ್ಲರೂ ಇಂಗ್ಲಿಷ್ ಭಾಷೆಯನ್ನೇ ಹೆಚ್ಚಾಗಿ ಬಳಸಿಬಿಡುತ್ತೇವೆ. ಆದರೆ, ಮನೆಯಲ್ಲಿ ಹಾಗೂ ಎಲ್ಲೆಲ್ಲೆ ಸಾಧ್ಯವೋ ಅಲ್ಲೆಲ್ಲಾ ನಮ್ಮ ಮಾತೃಭಾಷೆಯಲ್ಲೇ ಮಾತನಾಡಿ ಅದನ್ನು ಜೀವಂತ ಭಾಷೆಯಾಗಿ ಇರಿಸಬೇಕು. ನಾವು ಶಾಲೆಯಲ್ಲಿ ಕಲಿಯುತ್ತಿದ್ದಾಗ ಇದೇ ರೀತಿಯ ಆಟಕ್ಕೆ ‘ಕತ್ತೆಗೆ ಬಾಲ ಅಂಟಿಸುವ ಆಟ' ಎನ್ನುತ್ತಿದ್ದೆವು. ನಾನು ಕಲಿಯುತ್ತಿದ್ದ ಹಳ್ಳಿಯ ಶಾಲೆಯ  ಕೊಠಡಿ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಶಿಕ್ಷಕರೋ ಅಥವಾ ವಿದ್ಯಾರ್ಥಿಗಳಲ್ಲಿ ಯಾರಾದರೊಬ್ಬರು ಕಪ್ಪುಹಲಗೆಯ ಮೇಲೆ ದೊಡ್ಡದಾಗಿ ಕತ್ತೆಯ ಚಿತ್ರ ಬಿಡಿಸುತ್ತಿದ್ದರು. ನಂತರ ಒಬ್ಬೊಬ್ಬರಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಆ ಕತ್ತೆಗೆ ಸರಿಯಾದ ಜಾಗದಲ್ಲಿ ಬಾಲವನ್ನು ಅಂಟಿಸಲು ಪ್ರಯತ್ನಿಸುತ್ತಿದ್ದೆವು. ಆ ಒಂದು ಪಿರಿಯಡ್‌ನಲ್ಲಿ ಇಡೀ ತರಗತಿಯು ಲಾಫಿಂಗ್ ಕ್ಲಬ್ ಆಗಿರುತ್ತಿತ್ತು. ಕಣ್ಣಲ್ಲಿ ನೀರು ಬರುವವರೆಗೂ ನಗುತ್ತಿದ್ದೆವು. ‘ಕಣ್ಣಾಮುಚ್ಚಾಲೆ’ (ಬ್ಲೈಂಡ್ ಮ್ಯಾನ್ಸ್ ಬಫ್)  ಆಟ ಕೂಡ ಅಷ್ಟೇ ಮಜವಾಗಿರುತ್ತಿತ್ತು.

ಒಮ್ಮೆ ಟಿ.ವಿ. ವಾಹಿನಿಯೊಂದರಲ್ಲಿ, "ಕಣ್ಣು ತೆರೆದು ಎಚ್ಚರಿಕೆಯಿಂದ ನೋಡಿ" ಎಂಬ ಸಾಲು ಪ್ರಸಾರವಾಗುತ್ತಿತ್ತು. ಮೊದಲಿಗೆ ಅದು ನನಗೆ ವಿಚಿತ್ರ ಅನಿಸಿತು. ಆದರೆ, ಕ್ರಮೇಣ ಅದರ ಅರ್ಥ ನನಗೆ ಅರಿವಾಗತೊಡಗಿತು. ಈ ಆಟವಾಡಿದ ಬಳಿಕ ಆ ಸಾಲನ್ನು "ಕಣ್ಣು ಮುಚ್ಚಿ ಮನಸ್ಸನ್ನು ಎಚ್ಚರಗೊಳಿಸಿಕೊಳ್ಳಿ" ಎಂದು ಬದಲಿಸಬೇಕು ಅನ್ನಿಸಿತು. ನನ್ನ ಮಟ್ಟಿಗೆ ಅದನ್ನು ಪಾಲಿಸುವುದಕ್ಕೂ ಆರಂಭಿಸಿದೆ. ಯಾವುದಾದರೂ ಸಮಸ್ಯೆ ಹಠಾತ್ತನೆ ಎದುರಾದಾಗ ಮನೆಯಲ್ಲಾಗಲೀ ಅಥವಾ ಕಚೇರಿಯಲ್ಲಾಗಲೀ ಸದ್ದುಗದ್ದಲವಿರದ ಜಾಗವೊಂದರಲ್ಲಿ ಒಬ್ಬರೇ ಕುಳಿತು ಕಣ್ಣು ಮುಚ್ಚಿಕೊಂಡು ಮನಸ್ಸನ್ನು ಶಾಂತಸ್ಥಿತಿಗೆ ತಂದುಕೊAಡು ಆಲೋಚಿಸುವ ಪ್ರಯತ್ನ ಮಾಡುತ್ತೇವೆ. ಆ ಸಮಸ್ಯೆಗೆ ನಾವೇ ಕಾರಣವಾಗಿರಲಿ ಅಥವಾ ಅದು ಅನಿರೀಕ್ಷಿತವಾಗಿ ಎದುರಾಗಿರಲಿ, ನಮಗೆ ಆಗಿಹೋದ ಸಂಗತಿಯನ್ನು ಬದಲಿಸಲು ಸಾಧ್ಯವಿಲ್ಲ. ಹೀಗಾಗಿ, "ಮುಂದೇನು ಮಾಡಬೇಕು?" ಎಂದು ನಮ್ಮನ್ನು ನಾವೇ ಕೇಳಿಕೊಂಡು, ಇರುವ ಎಲ್ಲ ಸಾಧ್ಯತೆಗಳ ಬಗ್ಗೆ ಯೋಚಿಸಿ, ಕೊನೆಗೆ ಒಂದು ನಿರ್ಧಾರಕ್ಕೆ ಬರುತ್ತೇವೆ. ಅಷ್ಟಕ್ಕೂ ಕಣ್ಣು ಮುಚ್ಚಿಕೊಂಡಾಗಲೇ ಮುಖ್ಯವಾದ ಸಂಗತಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ ನೋಡಿ. ಪ್ರತಿದಿನ ಕೆಲವೇ ನಿಮಿಷಗಳ ಕಾಲ ಕಣ್ಣು ಮುಚ್ಚಿ ಶಾಂತವಾಗಿ ಕುಳಿತುಕೊಳ್ಳುವುದು ಹಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು.

ತೆರೆದ ಕಣ್ಣುಗಳು, ಮುಚ್ಚಿದ ಕಣ್ಣುಗಳು, ಬಟ್ಟೆಯಿಂದ ಮುಚ್ಚಿದ ಕಣ್ಣುಗಳು, ಸದಾ ಮುಂದೆಯೇ ನೋಡುವ ಕಣ್ಣುಗಳು, ಸುತ್ತಮುತ್ತಲನ್ನೆಲ್ಲ ಗಮನಿಸುವ ಕಣ್ಣುಗಳು, ಹಿಂದಿರುಗಿ ನೋಡುವ ಕಣ್ಣುಗಳು, ಗತಕಾಲದ ನೆನಪುಗಳಲ್ಲೇ ಕಳೆದುಹೋಗುವ ಕಣ್ಣುಗಳು, ಭವಿಷ್ಯದ ಕನಸು ಕಾಣುವ ಕಣ್ಣುಗಳು... ಹೀಗೆ ಕಣ್ಣಿನಲ್ಲಿ ಎಷ್ಟೊಂದು ವಿಧಗಳು! ಇವುಗಳ ಪೈಕಿ, ನಮ್ಮ ಕಣ್ಣುಗಳು ಯಾವ ರೀತಿಯವು ಎಂಬುದನ್ನು ನಾವೇ ಒಮ್ಮೆ ಪರಿಶೀಲಿಸಿಕೊಳ್ಳಬೇಕು. ಅಂದಂತೆ, ಈಗ ನಮ್ಮ ಪ್ರವಾಸಗಳಲ್ಲಿ ಮತ್ತೊಂದು ಬಗೆಯ ಕಣ್ಣನ್ನೂ ಕಾಣುತ್ತಿದ್ದೇವೆ.  ಅದುವೇ ಕ್ಯಾಮರಾದ ಕಣ್ಣು! ಕೆಲವು ಪ್ರವಾಸಿಗರು ತಾವು ಭೇಟಿ ನೀಡುವ ಸ್ಥಳಗಳನ್ನು ತಮ್ಮ ಕಣ್ಣುಗಳಿಂದ ನೋಡಿ ಆಸ್ವಾದಿಸುವುದೇ ಇಲ್ಲ. ಸದಾ ಕ್ಯಾಮರಾವನ್ನೇ ಕಣ್ಣಮುಂದೆ ಹಿಡಿದುಕೊಂಡಿರುತ್ತಾರೆ. ಛಾಯಾಚಿತ್ರಗಳು ಸುಂದರ ನೆನಪುಗಳನ್ನು ಉಳಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾವುದೇ ಸ್ಥಳವೊಂದನ್ನು ಬರೀ ಕ್ಯಾಮರಾ ಕಣ್ಣಿನಲ್ಲೇ ನೋಡುವುದಾದರೆ ಅಷ್ಟೊಂದು ಹಣ ಖರ್ಚು ಮಾಡಿ ದೂರ ಪ್ರಯಾಣ ಮಾಡುವುದಾದರೂ ಏಕೆ? ಇಂತಹ ಫೋಟೋಗಳು ಎಲ್ಲ ಕಡೆಗಳಲ್ಲೂ ಸಿಗುತ್ತವಲ್ಲ? ನನಗೆ ಚಿತ್ರಕಲಾವಿದ ಶ್ಯಾಮ್ ಜೋಶಿ ಅವರ ನೆನಪಾಗುತ್ತದೆ. ಒಮ್ಮೆ ಪ್ರವಾಸದಲ್ಲಿದ್ದಾಗ ಅವರನ್ನು, "ಶ್ಯಾಮ್ ಕಾಕಾ, ನಿಮ್ಮ ಬಳಿ ಕ್ಯಾಮರಾ ಇಲ್ಲವೇ?" ಎಂದು ಕೇಳಿದ್ದೆ. ಆಗ ಅವರು, "ವೀಣಾ, ನಾನು ಈ ಸ್ಥಳಗಳನ್ನು ಕಣ್ಣು ತೆರೆದು ನೋಡಿ ಖುಷಿಪಡುತ್ತೇನೆ. ಅವುಗಳ ಚಿತ್ರವನ್ನು ಮನಸ್ಸಿನಲ್ಲೇ ಬಿಡಿಸಿಕೊಳ್ಳುತ್ತೇನೆ. ಮನೆಗೆ ಹೋದ ಮೇಲೆ ಅವನ್ನು ಕ್ಯಾನ್‌ವಾಸ್ ಮೇಲೆ ಪೇಂಟಿಂಗ್ ಮಾಡುತ್ತೇನೆ" ಎಂದಿದ್ದರು. ಪ್ರವಾಸದ ವೇಳೆ ನಾನು ಅತಿಯಾಗಿ ಛಾಯಾಚಿತ್ರಗಳನ್ನು ತೆಗೆಯತೊಡಗಿದಾಗಲೆಲ್ಲ ಅವರ ಈ ಮಾತು ನೆನಪಾಗಿ ತಕ್ಷಣವೇ ಮೊಬೈಲನ್ನು ಬದಿಗಿಟ್ಟು ಕಣ್ತುಂಬಿಕೊಳ್ಳಲು ಪ್ರಯತ್ನಿಸುತ್ತೇನೆ. ಪ್ರಯತ್ನಿಸುತ್ತೇನೆ ಎನ್ನುವುದೇನೋ ಸತ್ಯವೇ. ಆದರೆ ಅಭ್ಯಾಸ ಬಲ; ಕೈ ಮತ್ತೆ ಮತ್ತೆ ಮೊಬೈಲ್ ಕಡೆಗೇ ಎಳೆಯತ್ತಿರುತ್ತದೆ ಎನ್ನುವುದೂ ದಿಟವೇ!

ಕತ್ತೆಗೆ ಬಾಲ ಅಂಟಿಸುವ ಆಟ, ಕಣ್ಣಾಮುಚ್ಚಾಲೆಯಂತಹ (ಬ್ಲೈಂಡ್ ಮ್ಯಾನ್ಸ್ ಬಫ್) ಆಟಗಳು ನಮ್ಮಲ್ಲಿ ಅರಿವನ್ನು ಹೆಚ್ಚಿಸುತ್ತವೆ. ಬದುಕು ಯಾವಾಗಲೂ ಸುಲಭವಾಗಿರುವುದಿಲ್ಲ ಎಂಬುದನ್ನು ನೆನಪಿಸುತ್ತವೆ. ಕಣ್ಣು ತೆರೆದಿರುವಾಗಿನ ಅನುಭವಕ್ಕೂ ಹಾಗೂ ಕಣ್ಣು ಮುಚ್ಚಿಕೊಂಡಿರುವಾಗಿನ ಅನುಭವಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತವೆ. ಅಷ್ಟೇ ಅಲ್ಲ, ಸೃಷ್ಟಿ ನಮಗೆ ನೀಡಿರುವ ಕಣ್ಣುಗಳ ಮಹತ್ವವನ್ನೂ ತಿಳಿಸುತ್ತವೆ. ದೇವರಿಗೆ ತಲೆಬಾಗಿ ನಮಿಸಲು ಇದೊಂದೇ ಕಾರಣ ಸಾಕು ಬಿಡಿ. ಆಟದ ಹೆಸರು ಏನೇ ಇರಲಿ, ಅದು ಯಾವುದೇ ಭಾಷೆಯದ್ದಾಗಿರಲಿ, ಇಂತಹ ಆಟಗಳನ್ನು ಆಗಾಗ ಆಡಬೇಕು. ಸೃಷ್ಟಿಯು ನಮಗೆ ನೀಡಿರುವ ಕಣ್ಣುಗಳ ಬೆಲೆ ಏನೆಂಬುದನ್ನು ಅರಿತು, ಅದಕ್ಕಾಗಿ ಕೃತಜ್ಞತೆಯ ಭಾವ ಬೆಳೆಸಿಕೊಳ್ಳಬೇಕು. ಈ ಅರಿವು ನಮ್ಮಲ್ಲಿ ಮೂಡಿದಾಗ, ನಾವು ಇಲ್ಲವಾದ ಬಳಿಕವೂ ನಮ್ಮ ಕಣ್ಣುಗಳು ಬೇರೊಬ್ಬರ ಬದುಕಿಗೆ ಬೆಳಕಾಗಬಲ್ಲವು. ಆಗ ಸರ್ಕಾರಗಳಿಗೆ ಕಣ್ಣು ಮತ್ತು ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ಪ್ರತ್ಯೇಕ ಅಭಿಯಾನಗಳನ್ನು ನಡೆಸುವ ಅಗತ್ಯವೇ ಇರುವುದಿಲ್ಲ.

Post your Comment

Please let us know your thoughts on this story by leaving a comment.

Get in touch with us

Share your details for a call back and subscribe to our newsletter for travel inspiration.

+91

Listen to our Travel Stories

You May also like

View all
ದೃಷ್ಟಿಕೋನ
5 mins, read

ದೃಷ್ಟಿಕೋನ

Published in Vijay Karnataka 18th October 2026 …ನಮ್ಮ ವೇತನ ಎಷ್ಟಿರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಸಂಸ್ಥೆಯ ಕೈಯಲ್ಲಿರಬಹುದು. ಆದರೆ, ನನ್ನ ಮನಃಸ್ಥಿತಿ ಸಂಪೂರ್ಣ ನನ್ನ ಕೈಯಲ್ಲೇ ಇರುತ್ತದೆ. ನನ್ನ ಮನಃಸ್ಥಿತಿಯು ನಾನು ಯಾವ

ಪರಸ್ಪರ ಮಾತಾಡೋಣ!
5 mins, read

ಪರಸ್ಪರ ಮಾತಾಡೋಣ!

Published in Vijay Karnataka 4th October 2026 “ನಾಳೆ ನನಗೆ ಬಹಳ ಮುಖ್ಯವಾದ ಮೀಟಿಂಗ್ ಇದೆ. ಆದರೆ ನಾನು ಇಲ್ಲಿದ್ದೇನೆ ನೋಡಿ!” ಎಂದರು ಒಬ್ಬರು. “ಇದು ಬಜೆಟ್ ತಿಂಗಳು. ಹಣಕಾಸು ವರ್ಷದ ಕೊನೆಯ ದಿನಗಳಿವು. ಆದರೆ, ನಾನಾದರೋ ಇಲ್ಲಿ ಏನು

ರಂಗುರಂಗಿನ ರಂಗವಲ್ಲಿ ಈ ಪ್ರಪಂಚ
5 mins, read

ರಂಗುರಂಗಿನ ರಂಗವಲ್ಲಿ ಈ ಪ್ರಪಂಚ

Published in Vijay Karnataka 20th September 2026   ರಂಗುರಂಗಿನ ರಂಗವಲ್ಲಿ ಈ ಪ್ರಪಂಚ ...ಅಂಚಿನ ಸೀಟಿಗೆ ಒಬ್ಬ ಪುರುಷ ಪ್ರಯಾಣಿಕ ಬಂದು, ಸುಧೀರ್ ಮಧ್ಯದ ಸೀಟಿನಲ್ಲಿ ಕೂರುವಂತಾದರೆ ನಾನು ಕಿಟಕಿ ಪ್ಕಕದ ಸೀಟಿನಲ್ಲಿ ಕೂರ

Travel Memories Shared
by 9.9 Lakh+ Travellers

Rated 5.0 16.2K+ reviews10.1L+ Happy guests81.1K+ Tours completed

Veena World tour reviews

What are you waiting for? Chalo Bag Bharo Nikal Pado!