Published in Vijay Karnataka 18th October 2026
…ನಮ್ಮ ವೇತನ ಎಷ್ಟಿರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಸಂಸ್ಥೆಯ ಕೈಯಲ್ಲಿರಬಹುದು. ಆದರೆ, ನನ್ನ ಮನಃಸ್ಥಿತಿ ಸಂಪೂರ್ಣ ನನ್ನ ಕೈಯಲ್ಲೇ ಇರುತ್ತದೆ. ನನ್ನ ಮನಃಸ್ಥಿತಿಯು ನಾನು ಯಾವ ದೃಷ್ಟಿಕೋನ ಹೊಂದಿರುತ್ತೇನೆ ಎಂಬುದನ್ನು ನಿರ್ಧರಿಸುತ್ತದೆ…
2023ರ ಮೇ ತಿಂಗಳಲ್ಲಿ ಬೇಸಿಗೆ ಪ್ರವಾಸದ ಭರಾಟೆ ಬಲು ಜೋರಾಗಿದ್ದಾಗ ಗೋ ಫಸ್ಟ್ (ಮುಂಚಿನ ಗೋಏರ್) ದಿವಾಳಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿತು. ಇದರೊಂದಿಗೆ ನಮ್ಮ ರೂ 28 ಕೋಟಿ ಇಲ್ಲವಾಯಿತು. ಏನಾದರೂ ಹಣ ವಾಪಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ, ಎನ್.ಸಿ.ಎಲ್.ಟಿ.ಗೆ (ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ) ಕೇಳಿದ ಎಲ್ಲ ದಾಖಲೆಗಳನ್ನೂ ನಾವು ಸಲ್ಲಿಸಿದೆವು. ನ್ಯಾಯಮಂಡಳಿಯು 2025ರ ಜನವರಿಯಲ್ಲಿ ವಿಮಾನಯಾನ ಸಂಸ್ಥೆಯ ಆಸ್ತಿಗಳನ್ನು ವಿಲೇವಾರಿ ಮಾಡುವಂತೆ ಆದೇಶಿಸಿತು. ನಮ್ಮ ಹಣ ಶಾಶ್ವತವಾಗಿ ಕೈತಪ್ಪಿತು. ಪೈಸೆ ಪೈಸೆ ಉಳಿಸುವುದನ್ನು ರೂಢಿಸಿಕೊಂಡು ಬದುಕು ಕಟ್ಟಿಕೊಂಡ ನನ್ನ ಮನಸ್ಸಿಗೆ ಈ ನಷ್ಟವನ್ನು ಅರಗಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಇಂತಹ ನಷ್ಟಕ್ಕೆ ವಿಮೆ ಕೂಡ ಪರಿಹಾರ ಭರಿಸುವುದಿಲ್ಲ. ‘ಗಂಟೆಗಟ್ಟಲೆ ಸಮಯವನ್ನು ವ್ಯರ್ಥ ಮಾಡಿ ಕೊನೆಗೆ ನಿಮಿಷಗಳ ಬಗ್ಗೆ ಚಿಂತಿಸುತ್ತೇವೆ’ ಎಂಬ ಮಾತೊಂದಿದೆ. ಆದರೆ, ಅದು ಇಲ್ಲಿ ಸ್ವಲ್ಪ ಬೇರೆಯಾಗಿದ್ದು, ‘ಕೋಟ್ಯಂತರ ರೂಪಾಯಿ ಕಳೆದುಕೊಂಡು, ಸಾವಿರಾರು ರೂಪಾಯಿಗಳ ಬಗ್ಗೆ ಚಿಂತಿಸುತ್ತೇವೆ’ ಎನ್ನುವಂತಿತ್ತು. ನ್ಯಾಯಮಂಡಳಿ ಆದೇಶದ ನಂತರ ಅನಿಶ್ಚಿತತೆಯಾದರೂ ಕೊನೆಯಾಯಿತಲ್ಲ ಎಂಬುದೇ ಸಮಾಧಾನವಾಗಿತ್ತು. ‘ಆಗಿರುವುದನ್ನು ಒಪ್ಪಿಕೊಂಡು ಮುಂದಕ್ಕೆ ಸಾಗಬೇಕು’ ಎಂದು ನನಗೆ ನಾನೇ ಹೇಳಿಕೊಂಡೆ.
ಆದರೆ, ಗೋ ಫಸ್ಟ್ ನಮ್ಮನ್ನು ಅಷ್ಟು ಸುಲಭವಾಗಿ ಮರೆಯಲು ಬಿಟ್ಟುಬಿಡಲಿಲ್ಲ! ಪ್ರತಿಯೊಂದು ಏರ್‌ಲೈನ್ ಮೀಟಿಂಗಿನಲ್ಲೂ ಅದು ಪ್ರಸ್ತಾಪಕ್ಕೆ ಬರುತ್ತಿತ್ತು. ನಮಗಾಗಿದ್ದ ಹಣದ ನಷ್ಟ ಅದಕ್ಕೆ ಕಾರಣವಲ್ಲ; ಬದಲಿಗೆ, ಗೋ ಫಸ್ಟ್ ಸ್ಥಗಿತಗೊಂಡಿದ್ದರಿAದ ಹಲವು ವಿಮಾನ ಮಾರ್ಗಗಳು ಬಂದ್ ಆಗಿದ್ದುದು ಹಾಗೂ ಇತರ ವಿಮಾನಯಾನ ಸಂಸ್ಥೆಗಳು ಆ ಮಾರ್ಗಗಳಲ್ಲಿ ಸಂಚಾರ ಕಾರ್ಯಾಚರಣೆ ಆರಂಭಿಸಿದಾಗ ಪ್ರಯಾಣ ದರಗಳು ದುಪ್ಪಟ್ಟಾಗಿದ್ದುದು ಅದಕ್ಕೆ ಕಾರಣವಾಗಿತ್ತು ಒಂದೊಮ್ಮೆ ನಾವು ಬಲು ಅಗ್ಗದ ದರದಲ್ಲಿ ನೀಡುತ್ತಿದ್ದ ಪ್ರವಾಸ ಪ್ಯಾಕೇಜ್‌ಗಳ ಬೆಲೆ ಜಾಸ್ತಿಯಾಯಿತು. ಆರೇಳು ವರ್ಷಗಳ ಹಿಂದೆ,ಕೇವಲ ನಾವು ರೂ 30,000ಕ್ಕೆ ಥಾಯ್ಲೆಂಡ್ ಪ್ರವಾಸ ಒದಗಿಸುತ್ತಿದ್ದುದು ಈಗ ಇತಿಹಾಸವೆಂಬ ಪರಿಸ್ಥಿತಿ ಉಂಟಾಯಿತು.
ಒಂದು ದಿನ, ಏರ್‌ಲೈನ್ ಮೀಟಿಂಗ್ ಮುಗಿಸಿ ಹೊರಬರುತ್ತಿರುವ ಕ್ಷಣದಲ್ಲಿ ನನ್ನ ಆಲೋಚನೆಯ ದಿಕ್ಕೇ ಬದಲಾಗಿಬಿಟ್ಟಿತು. ಅದೊಂದು ಸಣ್ಣ ಪವಾಡವೇ ಸರಿ. ಗೋ ಫಸ್ಟ್ ದಿವಾಳಿಯಾಗಿದ್ದನ್ನು ಬದಿಗಿಟ್ಟು ನೋಡಿದರೆ, ‘ವೀಣಾ ವರ್ಲ್ಡ್’ ಆರಂಭವಾದ ದಿನದಿಂದಲೂ ಆ ಸಂಸ್ಥೆ ನಮಗೆ ಹಾಗೂ ನಮ್ಮ ಪ್ರವಾಸಿ ಅತಿಥಿಗಳಿಗೆ ತುಂಬಾನೆ ಬೆಂಬಲ ನೀಡಿತ್ತು. ಆ ಕಂಪನಿಯಿAದಾಗಿಯೇ ವಿಮಾನ ಪ್ರಯಾಣದ ವೆಚ್ಚವನ್ನೂ ಒಳಗೊಂಡಂತೆ, ಶಿಮ್ಲಾ–ಮನಾಲಿ ಪ್ರವಾಸವನ್ನು ರೂ 20,000ಕ್ಕೆ ಹಾಗೂ ಕಾಶ್ಮೀರ ಪ್ರವಾಸವನ್ನು ರೂ 30,000ಕ್ಕೆ ಲಭ್ಯವಾಗಿಸುವುದು ನಮಗೆ ಸಾಧ್ಯವಾಗಿತ್ತು. ಪ್ರವಾಸದ ಋತುವಿನಲ್ಲಿ ಪ್ರತಿದಿನ ನಮ್ಮ 200ಕ್ಕೂ ಹೆಚ್ಚು ಪ್ರವಾಸಿಗರು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿಯುವುದನ್ನು ಕಂಡು ಅಲ್ಲಿನ ಅಧಿಕಾರಿಯೊಬ್ಬರು ಒಮ್ಮೆ “ಮುಂಬೈನಲ್ಲಿ ಯಾರನ್ನಾದರೂ ಉಳಿಸಿದ್ದೀರಾ, ಇಲ್ಲಾ, ಎಲ್ಲರೂ ಶ್ರೀನಗರಕ್ಕೇ ಬಂದಿದ್ದಾರಾ” ಎಂದು ಕೇಳಿದ್ದರು! (ವಹಾಂ ಮುಂಬೈ ಮೇಂ ಕಿಸೀ ಕೋ ರಖಾ ಹೈ ಕಿ ನಹೀಂ, ಕಿ ಸಾರೆ ಶ್ರೀನಗರ ಆ ಗಯೇ ಹೈಂ?) ’ವೀಣಾ ವರ್ಲ್ಡ್’ನ ಬೆಳವಣಿಗೆಯಲ್ಲಿ ಗೋ ಫಸ್ಟ್ ಏರ್‌ಲೈನ್ ಮಹತ್ವದ ಪಾತ್ರ ವಹಿಸಿತ್ತು ಎಂಬುದರಲ್ಲಿ ಎರಡನೇ ಮಾತಿಲ್ಲ. ಹೀಗಾಗಿ, ಇನ್ನು ಮುಂದೆ ಆ ಕಂಪನಿಯನ್ನು ಯಾವ ಕಾರಣಕ್ಕೂ ದೂಷಿಸಬಾರದು. ಆಗಿದ್ದೆಲ್ಲಾ ಆಗಿಹೋಗಿದೆ. ಒಳ್ಳೆಯ ದಿನಗಳನ್ನು ನೆನಪಿಸಿಕೊಂಡು ಸಂತೋಷಪಡೋಣ ಎಂದುಕೊಂಡೆ. ಅಬ್ಬಾ! ಆ ಒಂದು ಆಲೋಚನೆಯೇ ಮನಸ್ಸನ್ನು ಅದೆಷ್ಟು ಹಗುರಗೊಳಿಸಿತು. ನಮ್ಮ ತಿಂಗಳ ‘ಲಕ್ಷ್ಯ’ ಸಭೆಯಲ್ಲಿ, ದೇಶದ ಬೇರೆ ಬೇರೆ ಕಡೆಗಳಲ್ಲಿರುವ ನಮ್ಮ ತಂಡಗಳಿಗೆ ಗೋ ಫಸ್ಟ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುವಂತೆ ಹಾಗೂ ಆ
ಕಂಪನಿಯನ್ನು ದೂರುವ ಅಭ್ಯಾಸವನ್ನು ಕೈಬಿಡುವಂತೆ ಕೇಳಿಕೊಂಡೆ. ಆಕಾಶವನ್ನು ಕವಿದ ಮೋಡ ಸರಿದು ತಿಳಿಯಾದಂತಹ ಅನುಭವ ನನಗಾಯಿತು.
ಈ ಫೆಬ್ರುವರಿಯಲ್ಲಿ ನಮ್ಮ ಸಂಸ್ಥೆಯಲ್ಲಿ ವೇತನ ಪರಿಷ್ಕರಣೆ ನಡೆಯಿತು. ಮಾನವ ಸಂಪನ್ಮೂಲ ವಿಭಾಗದಿಂದ ಬಂದ ಹಲವು ಉಲ್ಲೇಖಗಳ ಪೈಕಿ ಒಂದು ಸಾಲು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತು: ‘ನಿಮ್ಮ ವೇತನವು ಸಂಸ್ಥೆಯಿAದ ನಿಮಗೆ ದೊರೆಯುವ ಪ್ರತಿಕ್ರಿಯೆಯಾಗಿರುತ್ತದೆ’ ಎಂಬುದು. ಆ ಪ್ರತಿಕ್ರಿಯೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆಯೋ ಇಲ್ಲವೇ ನಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆಯೋ ಎಂಬುದು ಸಂಪೂರ್ಣವಾಗಿ ನಮ್ಮ ಕೈಯಲ್ಲಿರುತ್ತದೆ. ವೇತನ ಪರಿಷ್ಕರಣೆಯಿಂದ ನನಗೆ ಸಂತೋಷವಾಗಿದ್ದರೆ, ಅದೇ ತೃಪ್ತಿಯಲ್ಲಿ ಮೈಮರೆಯಬಾರದು. ಏಕೆಂದರೆ, ತೃಪ್ತಿಯೆಂಬುದು ಮೊಳೆತುಬಿಟ್ಟರೆ ಬೆಳವಣಿಗೆ ನಿಂತುಹೋಗುತ್ತದೆ. ಒಂದು ವೇಳೆ ವೇತನದಿಂದ ಅತೃಪ್ತಿಯಾಗಿದ್ದರೆ, ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಸುಳಿಯತೊಡಗುತ್ತವೆ: ‘ನಮ್ಮ ಕಂಪನಿಗೆ ನನ್ನ ಉಪಯೋಗ ಇಷ್ಟೇನಾ’ ಎಂಬ ಪ್ರಶ್ನೆ ಕಾಡತೊಡಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎರಡು ಆಯ್ಕೆಗಳು ಉಳಿಯುತ್ತವೆ. ಮೊದಲನೆಯದು, ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಅವರು ನೀಡುವ ಕಾರಣವನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವುದು. ಅವರ ವಿವರಣೆಯಲ್ಲಿ ಅರ್ಥವಿದೆ ಎನ್ನಿಸಿದರೆ, ಕೆಲಸದಲ್ಲಿ ಸುಧಾರಣೆ ಮಾಡಿಕೊಂಡು ಮುಂಬರುವ ವರ್ಷ ಸೂಕ್ತ ವೇತನ ಪಡೆಯಲು ಪ್ರಯತ್ನ ಮುಂದುವರಿಸಬೇಕಾಗುತ್ತದೆ. ಅವರ ಅಭಿಪ್ರಾಯ ಸಮಂಜಸವಾಗಿಲ್ಲ ಎಂದಾದರೆ, ಅದರ ಬಗ್ಗೆಯೇ ಕೊರಗುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಆಗ, ಬೇರೆ ಸಂಸ್ಥೆಗೆ ಹೋಗುವ ನಿರ್ಧಾರ ಕೈಗೊಳ್ಳುವುದೇ ಸೂಕ್ತ. ಇದರಿಂದ ನಿಮಗೂ ಒಳ್ಳೆಯದು; ಸಂಸ್ಥೆಗೂ ಒಳಿತು. ನಮ್ಮ ವೇತನ ಎಷ್ಟಿರಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಸಂಸ್ಥೆಯ ಕೈಯಲ್ಲಿರಬಹುದು. ಆದರೆ, ಅದನ್ನು ನಾವು ಯಾವ ಮನಃಸ್ಥಿತಿಯೊಂದಿಗೆ ಸ್ವೀಕರಿಸಬೇಕು ಎಂಬುದು ನಮ್ಮ ಕೈಯಲ್ಲೇ ಇರುತ್ತದೆ. ಹೀಗಾಗಿ, ನಮ್ಮ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳೋಣ!
ಕೋವಿಡ್ ಸಂದರ್ಭವು ನಮಗೆ ‘ವರ್ಕ್ ಫ್ರಮ್ ಹೋಮ್’ ಅವಕಾಶವನ್ನು ಕಲ್ಪಿಸಿತು. ಅದನ್ನು ನಾವೆಲ್ಲರೂ ‘ಉದ್ಯೋಗ ಮತ್ತು ಬದುಕಿನ ನಿಜವಾದ ಸಮತೋಲನ’ ಎಂದೆವು. ಕಚೇರಿಗಳು ಮತ್ತೆ ತೆರೆಯುತ್ತಿದ್ದಂತೆ ‘ವರ್ಕ್ ಫ್ರಮ್ ಆಫೀಸ್’ ಸೂಚನೆಗಳೂ ಬರತೊಡಗಿದವು. ವಿರಾರ್ ನಲ್ಲಿ ನೆಲೆಸಿದ್ದ) ನಮ್ಮ ಜಾಹೀರಾತುಗಳನ್ನು ರೂಪಿಸುವ ವಿಭೂತಿ ಚುರಿ, ಗಾಯತ್ರಿ ನಾಯಕ್ ಮತ್ತು ಅವರ ತಂಡದವರು ಮನೆಯಿಂದಲೇ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಆದರೆ, ತಂಡದ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದರಿಂದ, ಎಲ್ಲರೂ ಒಟ್ಟಾಗಿ ಒಂದೆಡೆ ಇದ್ದು ಕೆಲಸ ಮಾಡುವುದು ಅಗತ್ಯವಾಗಿತ್ತು.
ನಮ್ಮದು ವೃತ್ತಿಪರ ಸಂಸ್ಥೆಯಾಗಿದ್ದರೂ ಭಾವನಾತ್ಮಕ ಬಾಂಧವ್ಯಕ್ಕೂ ಗಮನ ನೀಡುವ ಸಂಸ್ಥೆಯಾಗಿದೆ. ಉದ್ಯೋಗಿಗಳನ್ನು ಬೇಕೆಂದಾಗ ನೇಮಿಸಿಕೊಂಡು ಬೇಡವೆನ್ನಿಸಿದಾಗ ಕಿತ್ತು ಹಾಕುವ ಪದ್ಧತಿ ನಮ್ಮಲ್ಲಿಲ್ಲ. ಕಚೇರಿಗೆ ಮರಳಬೇಕೆಂಬ ನಿರ್ಧಾರ ತೆಗೆದುಕೊಂಡಾಗ ಕೆಲವರಿಗೆ ಅಳುವೂ ಬಂತು. ಆಗ ನಾನು ಅವರಿಗೆ ಹೇಳಿದೆ: “ನೀವು ಮನೆಯಿಂದಲೇ ಕೆಲಸ ಮಾಡುತ್ತಾ ಮೂರು ವರ್ಷಗಳನ್ನು ಕಳೆದಿದ್ದೀರಿ. ಈಗ ಹೊರಗೆ ಬಂದು ಕೆಲಸ ಮಾಡುವ ಸಮಯ. ರೈಲಿನಲ್ಲಿ ಪ್ರಯಾಣಿಸುವಾಗ ಪಾಡ್ ಕಾಸ್ಟ್ ಗಳನ್ನು ಕೇಳಿ, ಹಳೆಯ ಸ್ನೇಹಿತರನ್ನು ಭೇಟಿಯಾಗಿ. ಎಲ್ಲರೂ ತಂಡವಾಗಿ ಒಟ್ಟಿಗೆ ಒಂದೆಡೆ ಇದ್ದು ಕೆಲಸ ಮಾಡಿದರೆ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.” ಪ್ರಪಂಚ ಬದಲಾಗುತ್ತಿರುವಂತೆ ನಮ್ಮ ದೃಷ್ಟಿಕೋನವೂ ಬದಲಾಗಲೇಬೇಕು. ಕೊನೆಗೆ, ವಾರದಲ್ಲಿ ಎರಡು ದಿನ ಕಚೇರಿಯಿಂದ ಹಾಗೂ ಮೂರು ದಿನ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಗೆ ನಾವು ಒಪ್ಪಿಕೊಂಡೆವು. ಏಕಾಗ್ರತೆಯಿಂದ ಸೃಜನಶೀಲ ಕೆಲಸ ಮಾಡಲು ಮನೆಯ ವಾತಾವರಣ; ಪರಸ್ಪರ ಸಹಕಾರ ಮತ್ತು ತಂಡದ ಕೆಲಸಕ್ಕೆ ಕಚೇರಿ ಎಂಬ ನಿಯಮವನ್ನು ಅಳವಡಿಸಿಕೊಂಡೆವು
ಆಫ್ರಿಕಾದ ಹಳ್ಳಿಗಳಿಗೆ ಕಳುಹಿಸಲ್ಪಟ್ಟ ಎರಡು ಶೂ ಕಂಪನಿಗಳ ಕಾರ್ಯನಿರ್ವಾಹಕರ ಕಥೆ ನಮಗೆಲ್ಲ ಗೊತ್ತಿರುವಂಥದ್ದೇ. “ಇಲ್ಲಿನ ಜನರು ಯಾರೂ ಶೂ ಹಾಕುವುದೇ ಇಲ್ಲ. ಹೀಗಾಗಿ, ಇಲ್ಲಿ ಮಾರುಕಟ್ಟೆಯೇ ಇಲ್ಲ” ಎಂದು ಒಬ್ಬ ಹೇಳಿದ. “ಇಲ್ಲಿ ಯಾರೂ ಶೂ ಹಾಕುವುದೇ ಇಲ್ಲ. ಹಾಗಾಗಿ, ಇದೊಂದು ಬಲು
ದೊಡ್ಡ ಮಾರುಕಟ್ಟೆ!” ಎಂದ ಮತ್ತೊಬ್ಬ. ಡೇಲ್ ಕಾರ್ನೆಗೀ ಅವರು ಕಿಟಕಿಯೊಂದರ ಬಳಿ ನಿಂತಿದ್ದ ಇಬ್ಬರು ಕೈದಿಗಳ ಉದಾಹರಣೆಯನ್ನು ನೀಡುತ್ತಾರೆ. ಒಬ್ಬನಿಗೆ ಕಿಟಕಿಯಾಚೆ ಬರೀ ಕೆಸರಿನ ರಾಡಿ ಕಾಣಿಸಿದರೆ, ಮತ್ತೊಬ್ಬನಿಗೆ ಅದೇ ಕಿಟಕಿಯಿಂದ ಆಕಾಶದಲ್ಲಿ ಮಿನುಗುವ ಚುಕ್ಕಿಗಳು ಕಾಣಿಸಿದವಂತೆ. ಥಾಮಸ್ ಅಲ್ವಾ ಎಡಿಸನ್‌ಗೆ ವಿದ್ಯುತ್ ಬಲ್ಬ್ ಕಂಡುಹಿಡಿಯುವ ಪ್ರಯತ್ನದಲ್ಲಿ ಎದುರಾದ 10,000 ವೈಫಲ್ಯಗಳು ಬಲ್ಬ್ ಆವಿಷ್ಕಾರದೆಡೆಗಿನ 10,000 ಹೆಜ್ಜೆಗಳಾಗಿದ್ದವು. ಮರದಿಂದ ಸೇಬು ಕೆಳಗೆ ಬೀಳುವುದು ನಮಗೆ ಪ್ರಕೃತಿಯ ಸಹಜ ಗುಣಧರ್ಮ ಎನ್ನಿಸಿದರೆ ನ್ಯೂಟನ್‌ಗೆ ಅದು ಗುರುತ್ವಾಕರ್ಷಣೆಯ ತತ್ತ್ವವಾಗಿ ಗೋಚರಿಸಿತು. ಆರು ಮಂದಿ ಅಂಧರು ಆನೆಯ ಬೇರೆ ಬೇರೆ ಭಾಗಗಳನ್ನು ಮುಟ್ಟಿದಾಗ, ಒಬ್ಬನಿಗೆ ಅದು ಮರದ ಕಾಂಡದಂತೆ, ಮತ್ತೊಬ್ಬನಿಗೆ ಹಾವಿನಂತೆ, ಇನ್ನೊಬ್ಬನಿಗೆ ಬೀಸಣಿಗೆಯಂತೆ ಕಂಡು ಯಾರಿಗೂ ಅದರ ಸಂಪೂರ್ಣ ಸ್ವರೂಪ ಊಹೆಗೆ ನಿಲುಕಲಿಲ್ಲ. ಅರಮನೆಯೊಂದರ ನಿರ್ಮಾಣದ ಕೆಲಸ ಮಾಡುತ್ತಿದ್ದ ಮೂವರನ್ನು ನೀವು ಏನು ಮಾಡುತ್ತಿದ್ದೀರ ಎಂದು ಕೇಳಿದಾಗ, ಮೊದಲನೆಯವನು “ಇಟ್ಟಿಗೆ ಜೋಡಿಸುತ್ತಿದ್ದೇನೆ” ಎಂದರೆ, ಎರಡನೆಯವನು “ಗೋಡೆ ಕಟ್ಟುತ್ತಿದ್ದೇನೆ” ಎಂದ. ಮೂರನೆಯವನು “ಇಡೀ ಪ್ರದೇಶವನ್ನು ಲಕಲಕಿಸುವಂತೆ ಮಾಡುವ ಅರಮನೆಯನ್ನು ನಿರ್ಮಿಸುತ್ತಿದ್ದೇನೆ” ಎಂದು ಉತ್ತರಿಸಿದನಂತೆ. ಅಮೆರಿಕದ ಅಂತರ್ಯುದ್ಧದ ಸಂದರ್ಭದಲ್ಲಿ, ಶತ್ರುಗಳನ್ನು ಹತ್ತಿರಕ್ಕೆ ಬಿಟ್ಟುಕೊಂಡ ಕಾರಣಕ್ಕೆ ಅಬ್ರಹಾಂ ಲಿಂಕನ್‌ರನ್ನು ಟೀಕಿಸಿದಾಗ, “ನಾನು ಅವರನ್ನು ನನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮೂಲಕ ಶತ್ರುಗಳನ್ನು ನಾಶಪಡಿಸಿದ್ದೇನೆ” ಎಂದು ಅವರು ಉತ್ತರಿಸಿದ್ದರಂತೆ.
ಜಗತ್ತು ಬದಲಾಗಿದೆ. ಬದಲಾಗುತ್ತಿರುವ ಜಗತ್ತು ಹೊಸ ದೃಷ್ಟಿಕೋನವನ್ನು ನಿರೀಕ್ಷಿಸುತ್ತದೆ. ಹೀಗಾಗಿ, ಇವು ಪ್ರತಿಯೊಂದು ತರಗತಿಯಲ್ಲೂ ಮಕ್ಕಳಿಗೆ ತಿಳಿಸಬೇಕಾದ ಉದಾಹರಣೆಗಳಾಗಿವೆ. ಒಮ್ಮೆ ನಮ್ಮ ಜಾಹೀರಾತಿನಲ್ಲಿ ಈ ವಿಚಾರವನ್ನು ಬಹಳ ಚೆನ್ನಾಗಿ ಹೇಳಲಾಗಿತ್ತು: “ಪರಿಸ್ಥಿತಿ ಬದಲಾಗುವುದಿಲ್ಲ. ಹಾಗಾಗಿ, ನಮ್ಮ ಮನಃಸ್ಥಿತಿಯನ್ನಾದರೂ ಬದಲಿಸಿಕೊಳ್ಳೋಣ” ಎಂದು. ಬದುಕು ಸರಳವಾಗಿಯೇ ಇದೆ. ಆದರೆ, ಅದನ್ನು ನೋಡುವ ನಮ್ಮ ತಪ್ಪು ದೃಷ್ಟಿಕೋನವು ಅನಗತ್ಯ ಕ್ಲಿಷ್ಟತೆಗಳನ್ನು ಸೃಷ್ಟಿಸುತ್ತದೆ. ಹೀಗಾಗಿ, ಒಮ್ಮೆ ನಿಂತು ಕೇಳಿಕೊಳ್ಳೋಣ: ನನ್ನ ದೃಷ್ಟಿಕೋನ ಯಾವುದು?-ಎಂದು. ಸರಿಯಾದ ದೃಷ್ಟಿಕೋನವು ನಮಗೆ ಸರಿಯಾದ ಉತ್ತರಗಳನ್ನು ಕೊಡುತ್ತದೆ. ಕವಿ ಮಂಗೇಶ್ ಪಡಗಾಂವ್ಕರ್ ಅವರು ತಮ್ಮ ‘ಸಾಂಗಾ ಕಸಾ ಜಗಾಯಚಾ’ ಎಂಬ ಕವಿತೆಯಲ್ಲಿ ಕೇಳುವಂತೆ, “ನಾವು ಬದುಕನ್ನು ಕೊರಗುತ್ತಾ ಕಳೆಯುತ್ತೇವೋ ಅಥವಾ ಹಾಡುತ್ತಾ ಕಳೆಯುತ್ತೇವೋ?”- ಈ ಆಯ್ಕೆ ಪೂರ್ತಿ ನಮ್ಮ ಕೈಯಲ್ಲೇ ಇದೆ.





















































Post your Comment
Please let us know your thoughts on this story by leaving a comment.