Published in the Sunday Vijay Karnataka on 17 Aug 2025
ಕೊನೆಗೂ ಬಿಸಿಲ ಝಳ ಹೋಗಲಾಡಿಸುವ ಮಳೆಯು ಧರೆಗಿಳಿದಾಗ ಆದರದಿಂದ ಬರಮಾಡಿಕೊಳ್ಳುತ್ತೇವೆ. ಆದರೆ, ಅದು ವಿದಾಯ ಹೇಳಲು ಹೊರಟಾಗ ನಾವು ಸೂಕ್ತ ರೀತಿಯಲ್ಲಿ ಬೀಳ್ಕೊಡುಗೆ ನೀಡುತ್ತೇವೆಯೇ?
ನಾನು ಬರೆಯುತ್ತಿರುವ ಈ ಲೇಖನವನ್ನು ನೀವು ಓದುವ ವೇಳೆಗೆ ಇನ್ನೂ ಮಳೆ ಸುರಿಯುತ್ತಾ ಇರುತ್ತದೆಯೋ ಏನೋ ನನಗೆ ಗೊತ್ತಿಲ್ಲ. ಆದರೆ, ಕಳೆದ ಎರಡು ವಾರಗಳಿಂದಂತೂ ಮಳೆ ಬಿಟ್ಟೂಬಿಡದೆ ಸುರಿಯುತ್ತಿದೆ. ಇದೀಗ, ಯಾರಾದರೂ ನನ್ನನ್ನು ದೇಶದ ಅತ್ಯಂತ ತೇವದ ಸ್ಥಳ ಯಾವುದೆಂದು ಕೇಳಿದರೆ, “ಅದು ಚಿರಾಪುಂಜಿಯಲ್ಲ; ಬದಲಿಗೆ, ನಮ್ಮ ಮುಂಬೈ” ಎನ್ನುತ್ತೇನೆ.
ನನಗೆ ಈ ಕ್ಷಣ ಮೇಘಾಲಯದ ಮೋಸೀನ್ರಾಮ್ ಹಳ್ಳಿಯ ನೆನಪಾಗುತ್ತಿದೆ. ಅಧಿಕೃತವಾಗಿ ಭೂಮಿಯ ಮೇಲಿನ ಅತ್ಯಂತ ತೇವದ ಸ್ಥಳ ಇದಾಗಿದೆ. ಇಲ್ಲಿ ಮಳೆ ಶುರುವಾಯಿತೆಂದರೆ ವಾರಗಟ್ಟಲೆ ಚಂಡಿ ಹಿಡಿದು ಸುರಿಯುತ್ತದೆ. ಸ್ಥಳೀಯ ಜನರು ಕಿವಿಯ ಮೇಲೆ ಅಪ್ಪಳಿಸುವ ಮಳೆಯ ಸಪ್ಪಳದಿಂದ ಪಾರಾಗಲು ಮನೆಗಳ ಸೂರಿನ ಮೇಲೆ ಹುಲ್ಲಿನ ಹೊದಿಕೆಯನ್ನು ಹೊದಿಸುತ್ತಾರೆ. ಇದೀಗ ಮುಂಬೈ ಅದನ್ನು ನೆನಪಿಗೆ ತರುತ್ತಿದೆ. ಇಲ್ಲಿ ಒಂದೇಸಮನೆ ಮಳೆಯಾಗುತ್ತಿದೆ. ಸುರಿಯುತ್ತಿರುವ ಮುಂಗಾರು ಮಳೆಯು ಪ್ರತಿಯೊಂದು ಮಾತುಕತೆಯ ಭಾಗವಾಗಿದೆ: “ಮಳೆ ಸುರಿಯುತ್ತಿದೆ”, “ಸೂರ್ಯನನ್ನು ನೋಡಿ ದಿನಗಳೇ ಆಗಿಹೋದವು”, “ಬನ್ನಿ, ನಾರಿಮನ್ ಪಾಯಿಂಟ್‌ಗೆ ಹೋಗಿ ಮಳೆಯಲ್ಲಿ ನೆನೆಯೋಣ” ಎಂಬಂತಹ ಉದ್ಗಾರಗಳು ಇಲ್ಲಿ ಎಲ್ಲೆಲ್ಲೂ ಕೇಳಿಬರುತ್ತಿವೆ.
ಈ ಮಳೆಯಿಂದಾಗಿ ಈರುಳ್ಳಿ ಬೆಲೆ ತುಟ್ಟಿಯಾಗಿದೆ. ಪಕೋಡಾ ಬಗೆಗೆ ದೇಶದಾದ್ಯಂತ ಆಸಕ್ತಿ ಹೆಚ್ಚಿರುವುದೂ ಇದಕ್ಕೆ ಒಂದಷ್ಟು ಕಾರಣವಾಗಿದೆ ಎಂಬುದು ಬೇರೆ ಮಾತು. ಈಗ ಮಳೆಯ ವಿಷಯಕ್ಕೆ ಬರುವುದಾದರೆ, ಈ ವರ್ಷದ ವರ್ಷಧಾರೆಯು ಬೇರೆಯದೇ ರೀತಿಯಲ್ಲಿದೆ- ಧರೆಗೆ ಇಳಿಯುತ್ತಿರುವ ಜಲಧಾರೆಯಲ್ಲಿ ಏನೋ ಒಂದು ಬಗೆಯ ಕ್ರಮಬದ್ಧತೆ, ವಿನಯವಂತಿಕೆ ಕಂಡುಬರುತ್ತಿದೆ. ರೈಲುಗಳು ಎಂದಿನಂತೆಯೇ ಓಡಾಡುತ್ತಿವೆ, ಸರಕು ಸರಂಜಾಮುಗಳ ಪೂರೈಕೆ ಸಮಯಕ್ಕೆ ಸರಿಯಾಗಿ ಆಗುತ್ತಿದೆ; ಮಳೆಯ ಕಾರಣಕ್ಕಾಗಿ ಬದುಕಿನ ಬಂಡಿಯೇನೂ ಸ್ತಬ್ಧಗೊಂಡಿಲ್ಲ. ಮಳೆಯು ಉಪದ್ರವಕಾರಿಯಾಗಿ ವರ್ತಿಸುತ್ತಿಲ್ಲ. ಅಥವಾ ನಾವು, ಜನರು ಕೂಡ ಮಳೆಯನ್ನು ಎದುರಿಸಲು ಹೆಚ್ಚು ಸನ್ನದ್ಧರಾಗಿರುವುದು ಹಾಗೂ ಕ್ಷಮತೆ ಬೆಳೆಸಿಕೊಂಡಿರುವುದು ಇದಕ್ಕೆ ಒಂದಷ್ಟು ಕೊಡುಗೆ ನೀಡುತ್ತಿರಬಹುದು.
ಈಗ ಸುರಿಯುತ್ತಿರುವ ಮಳೆಯನ್ನು ನೋಡಿದರೆ, ಅದು ಯಾವುದೋ ಆಧ್ಯಾತ್ಮಿಕ ಗುರುವಿನ ಬೋಧನೆ ಪಡೆದು ಮೇಲಿನಿಂದ ಇಳಿಯುತ್ತಿದೆಯೇನೋ ಅನ್ನಿಸುತ್ತಿದೆ- “ವರ್ಷಧಾರೆ ಸುರಿಯಲಿ, ಅಷ್ಟು ಬಿರುಸಾಗಿ ಬಾರದಿರಲಿ. ಒಂದಿಷ್ಟು ದಯೆ ಇರಲಿ. ಬದುಕು ಮೂರಾಬಟ್ಟೆ ಆಗದಿರಲಿ. ಜನರಿಗೆ ಬೆಳಕಿನ ಸುದ್ದಿಪತ್ರಿಕೆ ಮೇಲೆ ಕಣ್ಣಾಡಿಸಲಾಗದಷ್ಟು ಉಪದ್ರವ ಉಂಟಾಗದಿರಲಿ” ಎಂಬ ಬೋಧನೆ ಅದಕ್ಕೆ ಆಗಿರಲಿಕ್ಕೂ ಸಾಕು”!
ಈ ಸಲದ ಮಳೆಗೆ ನಾವು ಧನ್ಯವಾದಗಳನ್ನು ಸಲ್ಲಿಸಲೇಬೇಕು. ಮುಂಬೈ ನಗರಿ ಸ್ತಬ್ಧಗೊಂಡಿಲ್ಲ. ಕಚೇರಿಗಳು ತೆರೆದಿವೆ. ಶಾಲೆಗಳು ಅರ್ಧ ದಿನದ ರಜೆ ಘೋಷಿಸಿಲ್ಲ. ನಮಗೆ ನಮ್ಮ ಕಚೇರಿಗಳ ಎಚ್.ಆರ್. ವಿಭಾಗದಿಂದ, “ಮಳೆಯ ಕಾರಣಕ್ಕಾಗಿ ಶೀಘ್ರವೇ ಹೊರಡಿ” ಎಂಬ ಯಾವ ಸಂದೇಶವೂ ಬಂದಿಲ್ಲ. ನಿಜವಾಗಿಯೂ, ವರುಣ ದೇವತೆಗೆ ಇದಕ್ಕಾಗಿ ನಾವು ಕೃತಜ್ಞರಾಗಿರಲೇಬೇಕು. ಆದರೆ, ಒಂದೊಮ್ಮೆ ಈಗ ಸುರಿಯುತ್ತಿರುವ ಮಳೆ ಒಂದಷ್ಟು ಕಾಲ ಹೀಗೆಯೇ ವಿಸ್ತರಣೆಯಾದರೆ ಆಗ ನಾವು, “ಮಳೆಯೇ, ಮಳೆಯೇ, ದೂರ ಸರಿ…(ರೈನ್, ರೈನ್, ಗೋ ಅವೇ…) ಎಂಬ ಹಾಡಿನ ಮೊರೆ ಹೋಗಬೇಕಾಗುತ್ತದೆ.
ನಮ್ಮ ಮನಃಸ್ಥಿತಿಯೇ ಹೀಗೆ. ಮೊದಲಿಗೆ, “ಬಾರೋ ಬಾರೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ” ಎಂದು ಪ್ರಾರ್ಥಿಸುತ್ತೇವೆ. ಮಳೆ ಸುರಿದು ಕೆರೆಕಟ್ಟೆಗಳು ಮೈದುಂಬಿ ಹೊಲಗದ್ದೆಗಳಲ್ಲಿ ಬಿತ್ತನೆಯಾಗುತ್ತಿದ್ದಂತೆಯೇ, ಮಳೆಯನ್ನು ಬೀಳ್ಕೊಡಲು ತಯಾರಾಗಿಬಿಡುತ್ತೇವೆ.
ಹೊಲಗದ್ದೆ ಎನ್ನುತ್ತಿದ್ದಂತೆಯೇ ನನ್ನ ಗ್ರಾಮದಲ್ಲಿನ ಬಾಲ್ಯದ ದಿನಗಳು ನನಗೆ ಕಣ್ಮುಂದೆ ಸುಳಿಯುತ್ತವೆ. ಶಿಕ್ಷಕರಾಗಿದ್ದ ನನ್ನ ಅಪ್ಪ, ಅಮ್ಮ ಕೃಷಿಕರೂ ಆಗಿದ್ದರು. ನಮ್ಮ ಪಾಲಿಗೆ ಮುಂಗಾರು ಮಳೆಯೆಂದರೆ ಭತ್ತ ಬೆಳೆಯುವ ಸಮಯ. ಅಂದರೆ, ಬಿತ್ತನೆ, ನಾಟಿ, ಕೊಯ್ಲಿನ ಅವಧಿ. ಆ ದಿನಗಳಲ್ಲಿ ನಾವು ರೈನ್‌ಕೋಟ್‌ಗಳು ಬರುವ ಮುನ್ನ ‘ಇರ್ಲಾ’ವನ್ನು ಬಳಸುತ್ತಿದ್ದೆವು. ಅಂದಂತೆ, ಮಳೆಯ ಮಧ್ಯೆಯೇ ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ತಲೆಯಿಂದ ಹಿಡಿದು ಅಂಗಾಲಿನವರೆಗೆ ರಕ್ಷಣೆ ನೀಡುವ ಕವಚ ಇದಾಗಿರುತ್ತಿತ್ತು.
ಮಕ್ಕಳಾದ ನಮಗೆ ಕೃಷಿ ಕೆಲಸದಲ್ಲಿ ಭಾಗಿಯಾಗುವುದೆಂದರೆ ಎಲ್ಲಿಲ್ಲದ ಖುಷಿ. ನಮ್ಮ ಕಾಲುಗಳು ಚರ್ಮ ಸುಕ್ಕುಗಟ್ಟುವಷ್ಟು ಹೊತ್ತು ನೀರಿನಲ್ಲಿ ಮುಳುಗಿರುತ್ತಿದ್ದವು. ನಮ್ಮ ಊರಿನ ಕಡೆ ಇದನ್ನು ‘ಕುಯಾ’ ಎಂದು ಕರೆಯಲಾಗುತ್ತದೆ. ಕೊಬ್ಬರಿಎಣ್ಣೆ ಸವರುವುದೇ ಅದಕ್ಕೆ ಉಪಶಾಮಕ. ಆಮೇಲೆ ಗಮ್ ಬೂಟುಗಳು ಹಾಗೂ ರೈನ್‌ಕೋಟುಗಳು ಬಂದು ಕೃಷಿ ಕೆಲಸಕ್ಕೆ ಅನುವು ಮಾಡಿಕೊಡುವ ಜೊತೆಗೆ ಮಳೆಯ ನಡುವೆಯೇ ಬಯಲಲ್ಲಿ ನಿಲ್ಲುವ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದವು.
ಜಮೀನಿನ ಕೆಲಸಗಾರರಿಗೆ ನಮ್ಮ ಮನೆಯಲ್ಲೇ ತಿಂಡಿ-ಊಟ ಸಿದ್ಧಪಡಿಸಲಾಗುತ್ತಿತ್ತು. ಶಿಡೊರಿ ಎಂಬ ಬಿದಿರಿನ ಬುಟ್ಟಿಗಳಲ್ಲಿ ಅವನ್ನು ಜಮೀನಿಗೆ ಕೊಂಡೊಯ್ಯುತ್ತಿದ್ದೆವು. ನಮ್ಮ ಪಾಲಿನ ಆಹಾರವನ್ನೂ ಅದರಲ್ಲೇ ಕೊಂಡುಹೋಗಿ ಜಮೀನಿನಲ್ಲೇ ಎಲ್ಲರೊಂದಿಗೆ ಕುಳಿತು ತಿನ್ನುತ್ತಿದ್ದೆವು. ಸುರಿವ ಮಳೆಯ ಮಧ್ಯೆ ಜಮೀನಿನಲ್ಲಿ ಕುಳಿತು ಬಿಸಿ ಸಾದಾ ಊಟ ಆಸ್ವಾದಿಸುವ ಗಮ್ಮತ್ತೇ ಬೇರೆ. ಅಂತಹ ಸುಖ ಬೇರೊಂದಿಲ್ಲ.
ಇತ್ತೀಚೆಗೆ ನನಗೆ ಅಚ್ಚರಿಯ ಪ್ರಶ್ನೆಯೊಂದು ಮೂಡಿತು- ನಾನು ಈಗಲೂ ಆಗಿನಂತೆಯೇ ಇರಬಲ್ಲೆನೆ ಎಂದು. ಇದರೊಟ್ಟಿಗೆ, ನಗರಕೇಂದ್ರಿತ ತರಬೇತಿಯ ಪ್ರಶ್ನೆಗಳು ತೂರಿಬಂದವು: “ಅಲ್ಲಿ ಹಾವುಗಳಿದ್ದರೆ ಹೇಗಪ್ಪಾ?”, “ಎಡವಿಬಿದ್ದರೆ ಹೆಂಗಪ್ಪಾ?”, “ಏನಾದರೂ ಚುಚ್ಚಿಕೊಂಡರೆ ಏನಪ್ಪಾ?” ಹೀಗೆ. ಬಾಲ್ಯದಲ್ಲಿ ಇಂತಹ ಭೀತಿಗಳೇ ಇರಲಿಲ್ಲ. ನಗರದ ಬದುಕೇ ಹಾಗೆ ನೋಡಿ. ಅದು ನಮಗೆ ಎಚ್ಚರಿಕೆ ವಹಿಸುವುದನ್ನು ಕಲಿಸುತ್ತದೆ; ಆದರೆ ನಮ್ಮ ಅಬೋಧಿತ ಸ್ಫೂರ್ತಿಯನ್ನು (ಸ್ಪಾಂಟೆನಿಟಿಯನ್ನು) ದೋಚಿಬಿಡುತ್ತದೆ.
ಕಳೆದ ಮೂರು ಆದಿತ್ಯವಾರಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಎಲ್ಲರೂ ಮನೆಯೊಳಗೆ ಹುದುಗಿಕೊಂಡಿದ್ದಾರೆ. ಅಂತಹ ಒಂದು ದಿನ ನನ್ನ ಗಂಡ ಸುಧೀರ್ ತನ್ನ ನೆಚ್ಚಿನ ಮಳೆಗೀತೆಯೊಂದನ್ನು ಕೇಳಿಸಿಕೊಳ್ಳಲು ಶುರು ಮಾಡಿದ. ನನ್ನ ಇ-ಮೇಲ್ ಕೆಲಸಗಳು ಮುಗಿದ ಮೇಲೆ ನಾನೂ ಅವನನ್ನು ಸೇರಿಕೊಂಡೆ.
ಮೊದಲಿಗೆ, ಅಮಿತಾಭ್ ಬಚ್ಚನ್ ಹಾಗೂ ಮೌಷುಮಿ ಚಟರ್ಜಿ ಅಭಿನಯಿಸಿರುವ ಮಂಜಿಲ್ ಸಿನಿಮಾದ “ರಿಮ್ ಝಿಮ್ ಗಿರೇ ಸಾವನ್” ನೋಡಿದೆವು. ಗೇಟ್ ವೇ ಆಫ್ ಇಂಡಿಯಾ ಹಾಗೂ ಮರೀನ್ ಡ್ರೈವ್‌ದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡಿನ ದೃಶ್ಯಗಳು ಸರಳವಾಗಿದ್ದರೂ ಕಾಲಾತೀತವೆನ್ನಿಸುವಷ್ಟು ಮನಮೋಹಕ.
ಆಮೇಲೆ, ‘ಚಲ್ತಿ ಕಾ ನಾಮ್ ಗಾಡಿ’ ಚಿತ್ರದ ‘ಏಕ್ ಲಡ್ಕಿ ಭೀಗಿ ಭಾಗಿ ಸೀ” ದರ್ಶಿಸಿದೆವು. ಆ ಹಾಡಿನಲ್ಲಿ ಕಿಶೋರ್ ಕುಮಾರ್ ಹಾಗೂ ಮಧುಬಾಲಾ ಅವರ ಲವಲವಿಕೆ ನಮ್ಮನ್ನೂ ಆವರಿಸಿದಂತಾಯಿತು. ನಂತರ, ‘ಶ್ರೀ 420’ಯ ‘ಪ್ಯಾರ್ ಹುವಾ ಇಕರಾರ್ ಹುವಾ’ಗೆ ಕಿವಿಗೊಟ್ಟು, ಅದರಲ್ಲಿನ ದೃಶ್ಯಗಳನ್ನು ಕಣ್ತುಂಬಿಕೊಂಡೆವು. ಈ ಗೀತೆಯಲ್ಲಿ ರಾಜ್‌ಕಪೂರ್ ಹಾಗೂ ನರ್ಗೀಸ್ ಜೋಡಿ ಒಂದೇ ಛತ್ರಿಯಡಿ ಇರುವ ಸನ್ನಿವೇಶದ ಮನಮೋಹಕ ದೃಶ್ಯಗಳು ಮೈಮನವನ್ನು ಪುಳಕಗೊಳಿಸಿದವು.
ತದನಂತರ, ಮಂಗೇಶ್ಕರ್ ಹಾಗೂ ಇನ್ನಿತರ ಮೇರು ಗಾಯಕರ ಗೀತೆಗಳನ್ನು ನೋಡುತ್ತಾ ಆಲಿಸಿದೆವು. ಅವತ್ತಿನ ನಮ್ಮ ಮುಂಗಾರಿನ ಸಂಗೀತ ರಸಸಂಜೆಯು ಸಂದುಹೋದ ಸವಿನೆನಪುಗಳು ಹಾಗೂ ಹೃದಯವನ್ನು ಬೆಚ್ಚಗಾಗಿಸುವ ಸಂಗತಿಗಳ ಪರಿಪೂರ್ಣ ಸಂಯೋಜನೆಯಾಗಿ ಕಳೆಯಿತು. ಇದರಿಂದಾದ ತೃಪ್ತಿಯು ಮತ್ತೊಂದು ಮಟ್ಟದ್ದು ಎಂದು ಪ್ರತ್ಯೇಕ ಹೇಳಬೇಕಿಲ್ಲ ಬಿಡಿ.
ನೀವು ಈ ಬರೆಹ ಓದುತ್ತಿರುವಾಗ ಇನ್ನೂ ಮುಸಲಧಾರೆಯಾಗುತ್ತಿದ್ದರೆ ಟಿ.ವಿ. ಅಥವಾ ಫೋನಿನಲ್ಲೇ ಮತ್ತೊಂದು ಮಳೆಗೀತೆಯನ್ನು ಹಚ್ಚಿರಿ. 1952ರಲ್ಲಿ ತೆರೆಕಂಡ ಹಾಲಿವುಡ್ ಶ್ರೇಷ್ಠ ಚಿತ್ರವಾದ “ಸಿಂಗಿಂಗ್ ಇನ್ ದಿ ರೈನ್”ನ ಟೈಟಲ್ ಟ್ರ್ಯಾಕ್‌ಅನ್ನು ಕಣ್ತುಂಬಿಕೊಳ್ಳಿ.
ಈಗ ಹಿರಿ ವಯಸ್ಸಿನಲ್ಲಿರುವವರು ಈ ಚಿತ್ರವನ್ನು ಬಹುಶಃ ನೋಡಿಯೇ ಇರುತ್ತಾರೆ. ಜೀನ್ ಕೆಲ್ಲಿ ನಿರ್ದೇಶಿಸಿ ಅಭಿನಯಿಸಿದ ಈ ಚಿತ್ರವು ಸಿನಿಮಾ ಲೋಕದ ಅನರ್ಘ್ಯ ಮುತ್ತುಗಳಲ್ಲಿ ಒಂದೆನ್ನಬಹುದು. ಅಂದಂತೆ, ಅದರಲ್ಲಿನ ಹಾಡು ಯಾವುದು ಗೊತ್ತಾ?
“ಸಿಂಗಿಂಗ್ ಇನ್ ದಿ ರೈನ್, ಐ ಆಮ್ ಹ್ಯಾಪಿ ಎಗೇನ್….”. ಈ ಹಾಡು ನಮ್ಮ ಮನಃಸ್ಥಿತಿಯನ್ನು ಥಟ್ಟನೆ ಎತ್ತರಕ್ಕೇರಿಸಿಬಿಡುತ್ತದೆ. ಇದು ಕೇಳಲು ಕಿವಿಗೆ ಮಾತ್ರ ಇಂಪಾಗಿರುವಂಥದ್ದಲ್ಲ; ಜೊತೆಗೆ, ದೃಶ್ಯಗಳನ್ನು ನೋಡಿ ಕಣ್ತುಂಬಿಕೊಳ್ಳುವುದಕ್ಕೂ ಸೊಗಸಾಗಿದೆ. ಉಲ್ಲಾಸಮಯ, ಉತ್ತೇಜಕ ಹಾಗೂ ಗಾಂಭೀರ್ಯ ಎಲ್ಲವೂ ಇಲ್ಲಿ ಮೇಳೈಸಿವೆ.
“ಅಯ್ಯೋ, ಮಳೆ ಸುರಿಯುತ್ತಿದೆ!” ಹಾಗೂ “ಓಹ್, ಮಳೆ ಸುರಿಯುತ್ತಿದೆ!” ಎಂಬ ಎರಡು ವಿಭಿನ್ನ ಉದ್ಗಾರಗಳು ಮಳೆ ಬಗೆಗಿನ ನಮ್ಮ ಧೋರಣೆಯ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಸುರಿವ ಮಳೆಯನ್ನು ನಾವು ನಿಲ್ಲಿಸಲಾಗದು. ಆದರೆ, ಅದನ್ನು ಸ್ವೀಕರಿಸಬಹುದಾದ ರೀತಿಯನ್ನು ನಾವು ನಿಯಂತ್ರಿಸಬಹುದಷ್ಟೆ.
“ನೀವು ಪ್ರೀತಿಸಬಹುದು ಇಲ್ಲವೇ ದ್ವೇಷಿಸಬಹುದು. ಆದರೆ, ಉದಾಸೀನವನ್ನಂತೂ ಮಾಡಲಾಗದು” ಎಂಬ ಹಿರಿಯರ ಹೇಳಿಕೆಯೂ ಇದೇ ವೇಳೆ ಇಲ್ಲಿ ಜ್ಞಾಪಕಕ್ಕೆ ಬರುತ್ತದೆ.
ಹೀಗಾಗಿ, ಮಳೆ ಅನಿವಾರ್ಯವಾದಾಗ ಅದನ್ನು ಬರಮಾಡಿಕೊಳ್ಳೋಣ. ಆದರೆ, ಮುಖವನ್ನು ಗಂಟಿಕ್ಕಿಕೊಂಡು ಬರಮಾಡಿಕೊಳ್ಳುವುದು ಬೇಡ. ನಗುನಗುತ್ತಾ ಆದರದಿಂದ ಸ್ವಾಗತಿಸೋಣ. “ಓಹ್, ಮಳೆ ಸುರಿಯುತ್ತಿದೆ!” ಎನ್ನುತ್ತಾ ಕುಣಿದು ಕುಪ್ಪಳಿಸೋಣ.
ಕವಿ ಮಂಗೇಶ್ ಪಡಗಾಂವ್ಕರ್ ಅವರು ಕೇಳಿದ ಪ್ರಕಾರ,
“ಹೇಗೆ ಬದುಕಬೇಕೆಂದು ಹೇಳಿ- ಗೊಣಗುತ್ತಲೋ, ಇಲ್ಲ, ಗುನುಗುತ್ತಲೋ?"
ಈ ಮಳೆಯ ಋತುವು ಪ್ರಕೃತಿಯ ಸಂದೇಶವೊಂದನ್ನು ಕೂಡ ಸೂಚಿಸುತ್ತದೆ:
‘ವಿಶ್ರಾಂತಗೊಳ್ಳಿರಿ, ವಿರಮಿಸಿ, ಪುನಶ್ಚೇತನಗೊಳ್ಳಿ’ ಎಂದು.
ಬಿಸಿಲಿನ ಕಿರಣಗಳು ಎಷ್ಟು ಅಮೂಲ್ಯ ಎಂಬುದನ್ನೂ ಇದು ನೆನಪಿಸುತ್ತದೆ; ಮಳೆ ಹಾಗೂ ಮೋಡಗಳು ವರ್ಷಾವಧಿ ವಿದ್ಯಮಾನವಾಗಿರುವ ಪ್ರದೇಶಗಳಲ್ಲಿ ಬದುಕು ಎಷ್ಟು ದುಸ್ತರವಿರಬಹುದು ಎಂಬ ಬಗ್ಗೆ ಇಣುಕುನೋಟವನ್ನೂ ನೀಡುತ್ತದೆ. ಕೇವಲ ಎರಡು ವಾರಗಳ ಕಾಲ ಸೂರ್ಯನ ಬೆಳಕು ಕಾಣದಿರುವುದು ನಮ್ಮನ್ನು ಚಡಪಡಿಕೆಗೆ ದೂಡುವುದಾದರೆ ಉತ್ತರ ಧ್ರುವದ ಬಳಿ ಜೀವನ ಅದೆಷ್ಟು ಸವಾಲಿನಿಂದ ಕೂಡಿರಬೇಕು ಎಂದು ಒಮ್ಮೆ ಊಹಿಸಿಕೊಳ್ಳಿ. ಹೀಗಾಗಿಯೇ, “ನೀವೆಷ್ಟು ಅದೃಷ್ಟಶಾಲಿಗಳು ಎಂಬುದನ್ನು ಅವಲೋಕಿಸಿಕೊಳ್ಳಿ. ನಿಮ್ಮ ಪಾಲಿಗೆ ಏನು ಲಭ್ಯವಾಗಿದೆಯೋ ಅದಕ್ಕೆ ಆಭಾರಿಯಾಗಿರಿ’ ಎಂದು ಮಳೆ ನಮಗೆ ಪಿಸುಗುಟ್ಟುತ್ತಿರುವಂತೆ ಭಾಸವಾಗುತ್ತದೆ.
ನಮ್ಮ ಮಗ ರಾಜ್ ಚಿಕ್ಕವನಾಗಿದ್ದಾಗ ಡಿಸ್ನಿಯ ‘ವಿನ್ನಿ ದಿ ಪ್ಹೂ’ದ ಕಟ್ಟಾ ಅಭಿಮಾನಿಯಾಗಿದ್ದ. ಅದರಲ್ಲಿನ ಒಂದು ಸಾಲು ನನ್ನಲ್ಲಿ ಈಗಲೂ ಅಚ್ಚೊತ್ತಿದಂತಿದೆ: “ಬದುಕು ನಿಮ್ಮೆದುರಿಗೆ ಮಳೆಯ ದಿನಗಳ ಸವಾಲನ್ನು ಎಸೆದಾಗ, ನಿಂತ ನೀರಲ್ಲಿ ಆಟವಾಡಿ” ಎಂಬುದೇ ಆ ಉಲ್ಲೇಖವಾಗಿದೆ.
ಹೌದು- ಮಳೆಯಲ್ಲಿ ಹಾಡೋಣ, ಮಳೆಯಲ್ಲಿ ಕುಣಿಯೋಣ, ಎಲ್ಲಕ್ಕಿಂತ ಮುಖ್ಯವಾಗಿ ಖುಷಿಯಾಗಿರೋಣ.
Post your Comment
Please let us know your thoughts on this story by leaving a comment.