“ನೀವು ಅಲಾಸ್ಕಾಗೆ ಹೋಗಿದ್ದಿರಾ? ವಾವ್! ಹೇಗಿತ್ತು? ಮಧ್ಯರಾತ್ರಿಯಲ್ಲಿ ಬೆಳಗುವ ಸೂರ್ಯ, ಉತ್ತರ ಪ್ರಭೆ ಇವೆಲ್ಲಾ ನಿಜವೇ?”
‘ಅಲಾಸ್ಕಾ” ಎಂದು ದಪ್ಪಕ್ಷರದಲ್ಲಿ ಅಚ್ಚುಹಾಕಿದ್ದ ನೀರಿನ ಬಾಟಲಿಯನ್ನು ನನ್ನ ಕೈಗೆ ವಾಪಸ್ಸು ಕೊಡುತ್ತಾ ಎತಿಹಾದ್ ಗಗನಸಖಿ ಹೀಗೆ ಕೇಳಿದಳು. ನಾನು ಹಿಮನದಿಗಳು ಹಾಗೂ ಬಂಗಾರದ ಶೋಧಕ್ಕೆ ಹೆಸರಾದ ನಾಡಿನಿಂದ ಹಿಂದಿರುಗುತ್ತಿರುವಾಗ ಈ ಬಾಟಲಿ ಅನಿರೀಕ್ಷಿತ ಆಪ್ತ ಸಂಭಾಷಣೆಗೆ ವೇದಿಕೆ ಕಲ್ಪಿಸಿತ್ತು.
ಈ ಸ್ಮರಣಿಕೆಗಳೇ ಹೀಗೆ ನೋಡಿ- ಈ ನೆನಪಿನ ಕೋಶಗಳು ನಮ್ಮನ್ನು ಎಂದೋ ಭೇಟಿ ನೀಡಿದ್ದ ಸ್ಥಳಕ್ಕೆ ಪುನಃ ಕೊಂಡೊಯ್ಯುವ ಸಮಯದ ಯಂತ್ರಗಳೇ ಸರಿ. ಇವು ಹಿಂದಿನ ಪ್ರವಾಸಗಳನ್ನಷ್ಟೇ ನೆನಪಿಸುವುದಿಲ್ಲ; ಇತರರನ್ನೂ ನಿಮ್ಮ ಕಥೆಗಳ ಆಂತರ್ಯಕ್ಕೆ ಬರಮಾಡಿಕೊಳ್ಳುತ್ತವೆ. ಜೊತೆಗೆ, ನಿಮ್ಮಲ್ಲಿ ಹೊಸ ಕಥೆಗಳ ಹುಟ್ಟಿಗೂ ಇಂಬು ನೀಡುತ್ತವೆ.
ಅಂದಂತೆ, ನಾನು ಎಲ್ಲಿಗೆ ಹೋದರೂ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯೊಂದನ್ನು ಒಯ್ಯುತ್ತೇನೆ. ಇದು ನಾನು ಕಾಲಾಂತರದಲ್ಲಿ ರೂಢಿಸಿಕೊಂಡ ಪರಿಸರಸ್ನೇಹಿ ಅಭ್ಯಾಸವಾಗಿದೆ. ಇದೀಗ ನನ್ನ ಈ ಅಭ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದೇನೆ: ಅದೇನೆಂದರೆ, ಪ್ರವಾಸಕ್ಕೆ ತೆರಳಿದ ಪ್ರತಿಯೊಂದು ಹೊಸ ಸ್ಥಳದಲ್ಲೂ ಹೊಸ ನೀರಿನ ಬಾಟಲಿಯೊಂದನ್ನು ಖರೀದಿಸುತ್ತೇನೆ. ಹಾಗೆಯೇ, ಅಲಾಸ್ಕಾದಲ್ಲಿ ಕೊಂಡ ಈ ಬಾಟಲಿಯಿಂದ ಪ್ರತಿಬಾರಿ ನೀರು ಕುಡಿಯುವಾಗಲೂ ಆ ನಿರ್ಮಲ ಸೊಬಗಿನ ತಾಣಕ್ಕೆ ನನ್ನ ಮನಸ್ಸು ಹಿಮ್ಮುಖವಾಗಿ ಪಯಣಿಸುತ್ತದೆ; ಪರ್ವತಗಳು, ಹಿಮಹಾಸುಗಳು ಹಾಗೂ ಕೊನೆಕಾಣದ ಆಗಸಗಳ ನೋಟ ಕಣ್ಮುಂದೆ ಸುಳಿಯುತ್ತದೆ.
ಅರ್ಥಪೂರ್ಣ ಸ್ಮರಣಿಕೆಗಳು
ನಾವು ಯಾವುದೇ ಪ್ರವಾಸ ಮಾಡಿದಾಗ ನೆನಪುಗಳಿಗಿಂತ ಮಿಗಿಲಾದುದು ನಮ್ಮ ಮೈಮನಗಳನ್ನು ತುಂಬಿಕೊಳ್ಳುತ್ತದೆ. ಅದೆಷ್ಟೋ ಫೋಟೋಗಳನ್ನು ಸೆರೆಹಿಡಿಯುತ್ತೇವೆ. ಗೆಳೆಯರು ಹಾಗೂ ಕುಟುಂಬದ ಪ್ರೀತಿಪಾತ್ರರಿಗಾಗಿ ಉಡುಗೊರೆಗಳನ್ನು ಕೊಳ್ಳಲು ಶಾಪಿಂಗ್ ಮಾಡುತ್ತೇವೆ. (ಬಹಳಷ್ಟು ಸಲ ಶಾಪಿಂಗ್‌ಅನ್ನು ಕೊನೆಗೆ ಮಾಡೋಣವೆಂದುಕೊಂಡು ವಿಮಾನ ನಿಲ್ದಾಣದ ಮಳಿಗೆಗಳಲ್ಲಿ ಏನು ಸಿಗುತ್ತದೋ ಅದನ್ನೇ ತೆಗೆದುಕೊಳ್ಳುವುದು ಬೇರೆ ಮಾತು)
ಅದೇನೇ ಇರಲಿ, ನಾವು ಒಂದಿಷ್ಟು ಹೆಚ್ಚು ಗಮನ ನೀಡಿದರೆ, ನಿಜವಾಗಿಯೂ ಅರ್ಥಪೂರ್ಣ ಎನ್ನಿಸುವುದನ್ನು ತರಬಹುದು. ಶಂಖವೊಂದರಲ್ಲಿ ವಿಶಾಲ ಸಮುದ್ರದ ಪಿಸುಮಾತು ಅಡಗಿರುವಂತೆಯೇ ನಾವು ಕೊಂಡುತರುವ ಸ್ಮರಣಿಕೆಗಳಲ್ಲೂ ಕಥೆಗಳು ಹುದುಗಿರುತ್ತವೆ. ಇವು ನಮ್ಮನ್ನು ತತ್‌ಕ್ಷಣದಲ್ಲೇ ಹಿಂದಿನ ಮಹತ್ವದ ಕ್ಷಣಗಳಿಗೆ ಕೊಂಡೊಯ್ಯುತ್ತವೆ. ಅಲಾಸ್ಕಾದಲ್ಲಿ ನಾನು ಇಂತಹ ಅದ್ಭುತ ಗಳಿಗೆಗಳನ್ನು ಪುನಃ ಪುನಃ ಅನುಭವಿಸಿದೆ ಎಂದು ಉಲ್ಲೇಖಿಸಬಯಸುತ್ತೇನೆ.
ಬಂಗಾರದ ತುಣುಕಿಗಾಗಿ ಜರಡಿ
ಫೇರ್‌ಬ್ಯಾಂಕ್ಸ್ ನಗರದಲ್ಲಿರುವ ಗೋಲ್ಡ್ ಡಾಟರ್ಸ್ನಲ್ಲಿ ಬಂಗಾರದ ರೇಕುಗಳಿಗಾಗಿ ಕೈಯಾರೆ ಸೋಸುವಾಗ ಇತಿಹಾಸ ಮರುಕಳಿಸುತ್ತಿರುವಂತೆ ಭಾಸವಾಯಿತು. ಅಂದಹಾಗೆ, ಅಲಾಸ್ಕಾದ ಆಧುನಿಕ ಅಧ್ಯಾಯವು ಶುರುವಾಗುವುದೇ ಬಂಗಾರದ ಕಥನದೊಂದಿಗೆ. ಇದು 1896ರಲ್ಲಿ ಕ್ಲಾಂಡೈಫ್ ಗೋಲ್ಡ್ ರಷ್ ವಿದ್ಯಮಾನದ ವೇಳೆ ಬಂಗಾರದ ಶೋಧದೊಂದಿಗೆ ಇದು ಪ್ರಾರಂಭವಾಯಿತು. ಆವರೆಗೆ ಅದು ನಿಷ್ಪ್ರಯೋಜಕ ಬಂಜರು ಪ್ರದೇಶ ಎಂದು ಉಪೇಕ್ಷೆಗೊಳಗಾಗಿದ್ದ ನೆಲವಾಗಿತ್ತು. ಅಂತಹ ಸಂದರ್ಭದಲ್ಲಿ, ಅಮೆರಿಕವು ರಷ್ಯಾದಿಂದ ಈ ನೆಲವನ್ನು ಕೇವಲ 7.2 ದಶಲಕ್ಷ ಡಾಲರ್‌ಗೆ ಖರೀದಿಸಿತು. ಆದರೆ ಇಲ್ಲಿನ ಬಂಗಾರವು ಎಲ್ಲವನ್ನೂ ಬದಲಿಸಿಬಿಟ್ಟಿತು. ಪ್ರಪಂಚದೆಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯತೊಡಗಿತು.
ಗೋಲ್ಡ್ ಡಾಟರ್ಸ್ ನಲ್ಲಿ ಸನಿಕೆ ಹಾಗೂ ಬಾಂಡಲಿಯನ್ನು ನನ್ನ ಕೈಗಿತ್ತು, ಮಣ್ಣನ್ನು ಹೇಗೆ ಅಗೆದು ಜರಡಿಯಾಡಬೇಕು ಎಂಬುದನ್ನು ಹೇಳಿಕೊಟ್ಟರು. ಇದು 19ನೇ ಶತಮಾನದಲ್ಲಿ ಇಲ್ಲಿಗೆ ಮುಗಿಬಿದ್ದ ಬಂಗಾರದ ಶೋಧಕರ ಪ್ರಯತ್ನವನ್ನು ನೆನಪಿಸಿತು. ಅಗೆದ ಮಣ್ಣನ್ನು ಜರಡಿ ಆಡಿಸುತ್ತಲೇ ತಟಕ್ಕನೆ ಮಿನುಗುವ ಬಂಗಾರದ ರೇಕುಗಳು ಗೋಚರಿಸಿದಾಗ ಮಗುವಿನಂತೆ ರೋಮಾಂಚನಗೊಂಡೆ. ತಂಡದವರು ಆ ಮಿನುಗುವ ರೇಕುಗಳನ್ನು ಗಾಜಿನ ಸೀಶೆಯೊಂದಕ್ಕೆ ತುಂಬಿಸಿಕೊಳ್ಳುವಂತೆ ಇಲ್ಲವೇ ಅದರಿಂದ ಪದಕ (ಪೆಂಡೆಂಟ್) ಮಾಡಿಸಿಕೊಳ್ಳುವಂತೆ ಹೇಳಿದರು. ನಾನು ಪದಕ ಮಾಡಿಸಿಕೊಂಡೆ. ಬೇಕೆಂದಾಗಲೆಲ್ಲಾ ಅದನ್ನು ಧರಿಸಬಹುದು ಹಾಗೂ ಗಮನಿಸಿ ಕೇಳಿದವರಿಗೆ ಅದರ ಬಗೆಗಿನ ಕಥೆ ಹೇಳಲು ಅದೊಂದು ಅವಕಾಶವಾಗುತ್ತದೆ ಎಂಬ ಆಲೋಚನೆ ನಾನು ಪದಕ ಮಾಡಿಸಿಕೊಂಡಿದ್ದಕ್ಕೆ ಕಾರಣವಾಗಿತ್ತು.
ಉಕ್ಕಿ ಹರಿವ ನದಿಯಲ್ಲಿ ರಾಫ್ಟಿಂಗ್
ಫೇರ್‌ಬ್ಯಾಂಕ್ಸ್ ನಿಂದ ಹೊರಟು ಡೆನಾಲಿ ರಾಷ್ಟ್ರೀಯ ಉದ್ಯಾನ ಮತ್ತು ಟಾಕೀತ್ನಾಗೆ ತೆರಳಿದೆವು. ಅಲ್ಲಿ ನೆನಾನಾ ನದಿಯಲ್ಲಿ ರಾಫ್ಟಿಂಗ್ ಮಾಡಿದ್ದೊಂದು ಅಚ್ಚಳಿಯದ ಅನುಭವ. ಕ್ಲ್ಯಾಸ್ 3-4 ರಾಪಿಡ್‌ಗಳೊಂದಿಗೆ ಅಡ್ವಾನ್ಸ್ಡ್ ಟೂರ್ ಆಯ್ಕೆ ಮಾಡಿಕೊಂಡು ಉಕ್ಕಿ ಹರಿವ ನದಿಯಲ್ಲಿ ಅಲೆಯ ಏರಿಳಿತದ ನಡುವೆ ಸೀಳಿ ಸಾಗುತ್ತಾ ಸಂತಸದಲ್ಲಿ ಮಿಂದೆವು. ಅಲ್ಲಿ ನಾನು ವೃತ್ತಿಪರ ಫೋಟೋಗ್ರ್ಯಾಫರ್‌ನಿಂದ ರಾಫ್ಟಿಂಗ್ ವೇಳೆಯ ಆಕ್ಷನ್ ಶಾಟ್‌ಗಳನ್ನು ಸೆರೆ ಹಿಡಿಸಿಕೊಂಡೆ. ರಾಫ್ಟಿಂಗ್ ಮಾಡುವಾಗ ನಮ್ಮ ಫೋಟೋಗಳನ್ನು ನಾವೇ ಕ್ಲಿಕ್ಕಿಸಲಾಗುವುದಿಲ್ಲ. ನಾನು ಅಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಪ್ರತಿ ಬಾರಿ ನೋಡಿದಾಗಲೂ ನನಗೆ ಹೊಸ ಚೈತನ್ಯ ಮೂಡಿದಂತಾಗುತ್ತದೆ.
ಇನ್ನು, ಟಾಕೀತ್ನಾದಲ್ಲಿ ಕಾಲಯಾನದಲ್ಲಿ ಹಿಂದಕ್ಕೆ ಸರಿದ ಭಾವನೆ ಮೂಡುತ್ತದೆ. ಇಲ್ಲಿರುವ ಪ್ರತಿಯೊಂದು ಅಂಗಡಿ ಮುಂಗಟ್ಟೂ ವಿಶಿಷ್ಟವೇ. ಇಲ್ಲಿನ ಜನ ಅತ್ಯಂತ ಸ್ನೇಹಮಯಿಗಳು. ಅಲಾಸ್ಕಾದಲ್ಲಿ ಸಿಲ್ವರ್ ಹ್ಯಾಂಡ್ ಮುದ್ರೆಯಿರುವ ಪ್ರತಿಯೊಂದು ವಸ್ತುವೂ ಯಾವುದೇ ಯಂತ್ರದ ಬಳಕೆಯಿಲ್ಲದೆ ಸಂಪೂರ್ಣ ಕರಕೌಶಲ್ಯದಿಂದ ಮಾಡಲ್ಪಟ್ಟಿರುತ್ತದೆ ಎಂಬುದು ಅಲ್ಲಿ ನನಗೆ ತಿಳಿಯಿತು. ಅಲ್ಲಿನ ಅಂಗಡಿಯೊಂದರಲ್ಲಿ ಸಾಂಪ್ರದಾಯಿಕ ಅಲಂಕಾರಿಕ ಹೂಗುಚ್ಛವೊಂದು ನನ್ನ ಗಮನ ಸೆಳೆಯಿತು. ಮತ್ತೊಂದೆಡೆ, ಪಕ್ಷಿಗಳ ಗರಿಗಳು, ಉಣ್ಣೆ, ದಂತ ಹಾಗೂ ಮೂಳೆ ಇವ್ಯಾವುದನ್ನೂ ವ್ಯರ್ಥಗೊಳಿಸದೆ ರೂಪಿಸಿದ ಕರಕುಶಲಕೃತಿ ನೋಡಿ ಮೆಚ್ಚುಗೆ ಮೂಡಿತು. ಅಂತಿಮವಾಗಿ, ಅಲಾಸ್ಕಾದ್ದೇ ವಿಶಿಷ್ಟವೆನ್ನಿಸುವ ಕರಕುಶಲತೆಯಿಂದ ಸಿದ್ಧಗೊಂಡ ಗಾಜಿನ ಮಣಿಗಳ ನಾಜೂಕಿನ ಕಿವಿಯೋಲೆಗಳನ್ನು ಕೊಂಡು ಅಲ್ಲಿಂದ ಹೊರಟೆ.
ಮಧ್ಯರಾತ್ರಿ ಪ್ರಜ್ವಲಿಸುವ ಸೂರ್ಯನಡಿ ಐಸ್‌ಕ್ರೀಮ್
ಎಲ್ಲಾ ಸ್ಮರಣಿಕೆಯೂ ಇರಿಸಿ ಸಂಗ್ರಹಿಸುವಂಥದ್ದೇ ಆಗಿರಬೇಕಿಲ್ಲ. ಕೆಲವೊಮ್ಮೆ ಅದು ಅನುಭವ ರೂಪದಲ್ಲಿಯೂ ಇರುತ್ತದೆ. ಒಂದು ಬೇಸಿಗೆಯ ರಾತ್ರಿ ಐಸ್‌ಕ್ರೀಮ್ ಅಂಗಡಿಗೆ ಹೋಗಿ ಅಲ್ಲಿದ್ದ ಸ್ಥಳೀಯರ ಜೊತೆಯಾದೆ. ಅಲಾಸ್ಕಾದ ಅಲ್ಪಾವಧಿಯ ಬೇಸಿಗೆಯಲ್ಲಿ ಮಾತ್ರ ತೆರೆಯುವ ಅಂಗಡಿ ಅದು. ರಾತ್ರಿ 11 ಗಂಟೆಯಾದರೂ ಆಕಾಶದಲ್ಲಿ ಸೂರ್ಯ ಪ್ರಜ್ಞಲಿಸುತ್ತಿದ್ದ. ಸ್ಥಳೀಯ ಸ್ವಾದದ ಐಸ್‌ಕ್ರೀಮ್‌ಅನ್ನು ಸಂಭ್ರಮದಿಂದ ಸವಿಯಲಾರಂಭಿಸಿದೆ. ಪ್ರಪಂಚವು ನಮಗಾಗಿಯೇ ಸ್ತಬ್ಧಗೊಂಡಿದೆಯೇನೋ ಎಂದೆನ್ನೆಸಿದ ಕ್ಷಣಗಳು ಅವಾಗಿದ್ದವು.
ಉಲು ಚಾಕು, ಹದಿನೈದು ವರ್ಷಗಳಾದ ಮೇಲೆ
ಸ್ಮರಣಿಕೆಗಳು ಕೆಲವೊಮ್ಮೆ ನಮ್ಮ ದಿನನಿತ್ಯದ ಬದುಕಿನ ಭಾಗವೂ ಆಗಿಬಿಡುತ್ತವೆ. ಅಲಾಸ್ಕಾಗೆ ನಾನು ಹದಿನೈದು ವರ್ಷಗಳ ಹಿಂದೆ ಮೊದಲ ಬಾರಿ ಹೋಗಿದ್ದಾಗ ಸಾಂಪ್ರದಾಯಿಕ ಉಲು ಚಾಕುವನ್ನು ಕೊಂಡು ತಂದಿದ್ದೆ. ಇದು ನಾವು ಬಳಸುವ ಮಾಮೂಲಿ ಚಾಕುವಿನಂತಿರುವುದಿಲ್ಲ. ಕತ್ತರಿಸಲು ಸೂಕ್ತವೆನ್ನಿಸುವಂತೆ ಬಾಗಿದ ಅಗಲವಾದ ಚಪ್ಪಟೆ ಅಲಗಿನಂತಿರುತ್ತದೆ. ನನ್ನ ಅಡುಗೆ ಸಹಾಯಕಿಯು ಅದನ್ನು ಮೀನು ಕತ್ತರಿಸಲು ಬಳಸಲು ಆರಂಭಿಸುವವರೆಗೆ ಆಗೊಮ್ಮೆ ಈಗೊಮ್ಮೆ ಮಾತ್ರವೇ ಉಪಯೋಗಿಸುತ್ತಿದ್ದೆ. ಅವಳು ಅದನ್ನು ಬಳಸಲು ಪ್ರಾರಂಭಿಸಿದಾಗ ನಾನು ಆಶ್ಚರ್ಯದಿಂದ ‘ಇದನ್ನು ಏಕೆ ಬಳಸುತ್ತೀಯ’ ಎಂದು ಕೇಳಿದ್ದೆ. ಆಗ ಅವಳು ನಗುತ್ತಾ, ‘ಇದು ಮೀನು ಕತ್ತರಿಸಲು ಹೇಳಿ ಮಾಡಿಸಿದಂತಿದೆ’ ಎಂದಿದ್ದಳು.
ಈ ಬಾರಿಯ ಪ್ರವಾಸದಲ್ಲಿ ನಾನು ಸ್ಥಳೀಯರೊಬ್ಬರನ್ನು ಈ ಬಗ್ಗೆ ಕೇಳಿದಾಗ, “ಮುಖ್ಯವಾಗಿ ಮೀನು ಕತ್ತರಿಸಲೆಂದೇ ಇದನ್ನು ಮಾಡಲಾಗುತ್ತದೆ. ಆದರೆ, ಬೇರೆಯ ಪದಾರ್ಥಗಳನ್ನು ಕತ್ತರಿಸುವುದಕ್ಕೂ ಬಳಸಬಹುದು’ ಎಂದರು. ನನ್ನ ಅಡುಗೆ ಸಹಾಯಕಿಗೆ ಇದು ಬಹಳ ಹಿಂದೆಯೇ ಗೊತ್ತಾಗಿಬಿಟ್ಟಿದೆ. ಆ ಉಲು ಚಾಕವು ಈಗಲೂ ನನ್ನ ಅಡುಗೆ ಮನೆಯಲ್ಲಿ ಬಳಕೆಯಾಗುತ್ತಿದೆ. ಪ್ರತಿಸಲ ಬಳಸುವಾಗಲೂ ಅಲಾಸ್ಕಾ ನನ್ನೊಂದಿಗೇ ಇದೆಯೇನೋ ಎಂಬ ಭಾವನೆ ಮೂಡಿಸುತ್ತದೆ.
ಸಿಹಿ ಪೇಯ, ಸೀಪ್ಲೇನ್ ಸೈಟ್‌ಸೀಯಿಂಗ್
ವಾಪಸ್ಸು ಬರುವಾಗ ನಾನು ಸ್ಥಳೀಯರ ಮಾಲೀಕತ್ವದ ಬರ್ಚ್ ಸಿರಪ್ ಫ್ಯಾಕ್ಟರಿಗೆ ಭೇಟಿ ಕೊಟ್ಟೆ. ಬರ್ಚ್ ಮರಗಳ ರಸವನ್ನು ನಿಧಾನವಾಗಿ ಭಟ್ಟಿ ಇಳಿಸಿ ಪಾನೀಯ ಸಿದ್ಧಪಡಿಸುವುದು ಈ ಉದ್ದಿಮೆಯ ಕಾರ್ಯ. ಅಲಾಸ್ಕಾದಲ್ಲಿ ಬಿಟ್ಟರೆ ಬೇರೆಲ್ಲೂ ಸಿಗದ ಈ ಸಿಹಿ ಪಾನೀಯದ ಬಾಟಲಿಗಳನ್ನು ನನ್ನ ಸ್ನೇಹಿತರಿಗಾಗಿ ಕೊಂಡುಕೊಂಡೆ.
ಇನ್ನು ನನ್ನ ಅಚ್ಚುಮೆಚ್ಚಿನ ಮ್ಯಾಗ್ನೆಟ್‌ಗಳನ್ನು ಕೊಂಡುಕೊಳ್ಳದೆ ಹೊರಡುವುದಾದರೂ ಹೇಗೆ? ನಾನು ಭೇಟಿ ನೀಡಿದ ಪ್ರತಿಯೊಂದು ಸ್ಥಳದಲ್ಲೂ ಇದನ್ನು ಖರೀದಿಸಿ ಸಂಗ್ರಹಕ್ಕೆ ಸೇರಿಸುತ್ತಿದ್ದೇನೆ. ನನ್ನಮಟ್ಟಿಗೆ, ಹಿಂದಿನ ಸಾಹಸಯಾನಗಳು ಹಾಗೂ ಭವಿಷ್ಯದ ಕನಸಿನ ಪರ್ಯಟನೆ ಇವೆರಡನ್ನೂ ನೆನಪಿಸುವ ಪುಟಾಣಿ ಸ್ಮರಣಿಕೆಗಳು ಇವು.
ಅಲ್ಲಿ ಕಳೆದ ಗಳಿಗೆಗಳು ಮರೆಯಲಾಗದಂಥವು. ಹಿಮಹಾಸುಗಳು ಹಾಗೂ ಪರ್ವತಗಳ ಮೇಲಿನ ಫ್ಲೈಟ್ ಸೀಯಿಂಗ್ ಟೂರ್, ಡೆನಾಲಿಯಿಂದ ಟಾಕೀತ್ನಾಗೆ ಅಲಾಸ್ಕಾ ರೈಲ್‌ರೋಡಿನಲ್ಲಿ ಟ್ರೈನ್ ಸವಾರಿ, ಪಚ್ಚೆ ಜಲರಾಶಿಯ ನಡುವೆ ಬೃಹತ್ ಮಂಜಿನ ಶೃಂಗಗಳಿಗೆ ಹೆಸರಾದ ವ್ಹಿಟ್ಟಿಯೆರ್‌ನಿಂದ ಹೊರಡುವ ಗ್ಲೇಸಿಯರ್ ಕ್ರೂಸ್ ಹೀಗೆ ಸುದೀರ್ಘ ಪಟ್ಟಿಯನ್ನೇ ಮುಂದಿಡಬಹುದು. ಜೊತೆಗೆ, ಹದವಾಗಿ ಸಿದ್ಧಪಡಿಸಿದ ಪ್ರಪಂಚದಲ್ಲೇ ಅತ್ಯಂತ ಸ್ವಾದಿಷ್ಟವೆನ್ನಬಹುದಾದ ಸಾಲ್ಮನ್ ಮೀನಿನ ಖಾದ್ಯ. ಇಲ್ಲಿ ಹಿಮಕರಡಿಯನ್ನೂ ಅರಸುತ್ತಾ ಸಾಗಬಹುದು ಅಥವಾ ಸೀಪ್ಲೇನ್‌ನಲ್ಲಿ ದೂರದ ಸರವೋರಕ್ಕೆ ತೆರಳಿ ಗಾಳದಲ್ಲಿ ಮೀನು ಹಿಡಿಯಲು ಪ್ರಯತ್ನಿಸಬಹುದು.
ಉಲಿಯುವ ಸ್ಮರಣಿಕೆಗಳು
ಸ್ಮರಣಿಕೆಗಳು ಕೇವಲ ಪ್ರದರ್ಶಕ ವಸ್ತುಗಳಲ್ಲ. ಅವು ಬಣ್ಣ, ಪರಿಮಳ, ಒನಪು ಹಾಗೂ ರುಚಿಯನ್ನು ಹುದುಗಿಸಿಕೊಂಡ ಕಥೆಗಳು. ಅವು ಆಮಂತ್ರಣಗಳು. ಅಲಾಸ್ಕಾದ ಆ ನೀರಿನ ಬಾಟಲಿಯು ವಿಮಾನ ಪ್ರಯಾಣದ ಮಧ್ಯೆ ಆಪ್ತ ಸಂಭಾಷಣೆಗೆ ಕಾರಣವಾಯಿತು. ಬಂಗಾರದ ಪದಕವು ಕುತೂಹಲಕರ ನೋಟಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಮನೆ ತಲುಪಿದ ಮೇಲೆ ಬರ್ಚ್ ಪೇಯ ಲೇಪಿಸಿಕೊಂಡು ರೊಟ್ಟಿ, ಇಡ್ಲಿ, ದೋಸೆ ಸವಿಯುತ್ತಾ ಕಥೆಗಳನ್ನು ಮೆಲುಕು ಹಾಕಬಹುದು.
ಮುಂದಿನ ಬಾರಿ ಪ್ರವಾಸ ಮಾಡುವಾಗ ನಿಮ್ಮಷ್ಟಕ್ಕೆ ನೀವೇ ಕೇಳಿಕೊಳ್ಳಿ:
ಮನೆಗೆ ಯಾವ ಕಥೆಯನ್ನು ತರಬಯಸುತ್ತೀರಿ ಎಂದು?
ಅದಕ್ಕಿಂತ ಮುಖ್ಯವಾದುದು...
ನೀವು ಮುಂದಿನ ಸ್ಮರಣಿಕೆಯನ್ನು ಎಲ್ಲಿ ಕೊಳ್ಳುವಿರಿ?
Post your Comment
Please let us know your thoughts on this story by leaving a comment.