Published in the Sunday Vijay Karnataka on 03 August 2025
...ನಾವು ಧನ್ಯವಾದ ಹೇಳಿ ಅಲ್ಲಿಂದ ಹೊರಟೆವು. ಅದಾದಮೇಲೆ, “ಹೊರಗೆ ನಾಮಫಲಕ ಸಹಿತ ಹಾಕಿಲ್ಲ” ಎಂಬ ಅವರ ಆ ಒಂದು ಮಾತು ನನ್ನನ್ನು ಕಾಡಲು ಮೊದಲಾಯಿತು. ಆಗ ತಕ್ಷಣವೇ, “ನಮ್ಮ ಸೇಲ್ಸ್ ಕಚೇರಿಗಳಿಗೆ ನಾಮಫಲಕ ಇಲ್ಲದಿದ್ದರೆ ಏನಾದೀತು?” ಎಂಬ ಯೋಚನೆ ನನ್ನೊಳಗೆ ಹುಟ್ಟಿಕೊಂಡಿತು.
ಬಹಳ ಅವಧಿಯ ನಂತರ, ಪಾರ್ಲೆಯಲ್ಲಿರುವ ಗಜಲೀಗೆ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ನನಗೆ ಒದಗಿಬಂತು. ಎಷ್ಟೇ ಕಡಿಮೆಯೆಂದರೂ ವರ್ಷಕ್ಕೆ ಮೂರ್ನಾಲ್ಕು ಸಲವಾದರೂ ನಾನು ಅಲ್ಲಿಗೆ ಎಡತಾಕುತ್ತೇನೆ. ಇದು ಕಳೆದ 20-25 ವರ್ಷಗಳಿಂದ ನಾನು ಪಾಲಿಸುತ್ತಾ ಬಂದಿರುವ ಪರಿಪಾಟವಾಗಿದೆ. ಗಜಲೀಗೆ ಹೋಗುವುದೆಂದರೆ ಇದಕ್ಕಿದ್ದಂತೆ ದಿಢೀರನೆ ಘಟಿಸುವಂಥದ್ದಲ್ಲ. ಅದೊಂದು ಯೋಜಿತ ಭೇಟಿಯಾಗಿರುತ್ತದೆ. ಅಲ್ಲಿಗೆ ಹೋಗುವ ದಿನ ನಾನು ಬೆಳಗಿನ ತಿಂಡಿ ತಿನ್ನುವುದಿಲ್ಲ. ನಮ್ಮೊಂದಿಗೆ ಅಲ್ಲಿಗೆ ಬರುವ ಕೆಲವರು ಹಿಂದಿನ ದಿನದ ರಾತ್ರಿ ಕೂಡ ಊಟ ತಪ್ಪಿಸಿಬಿಡುತ್ತಾರೆ. ಅಲ್ಲಿ ಭೂರಿ ಭೋಜನ ಸವಿದು ಸಂತೃಪ್ತಗೊಂಡು ಪ್ರತಿಯೊಬ್ಬರೂ, “ಇನ್ನು ಸದ್ಯದಲ್ಲೇ ಇಲ್ಲಿಗೆ ಪುನಃ ಬರುವ ಯೋಚನೆ ಇಲ್ಲ’ ಎಂದೇ ಉದ್ಗರಿಸುತ್ತೇವೆ. ಆದರೆ, ಒಂದೆರಡು ತಿಂಗಳಾಗುವಷ್ಟರಲ್ಲಿ ಅಲ್ಲಿನ ನಾರಾಯಣ್ ಚೌಗಲೆ ಅವರಿಗೆ ಫೋನ್ ಮಾಡಿ ಟೇಬಲ್ ಕಾಯ್ದಿರಿಸಲು ಕೋರಿಕೆ ಮುಂದಿಡುತ್ತೇವೆ. “ಗಜಲೀ ಎಂದರೆ ನಾರಾಯಣ್ ಹಾಗೂ ನಾವೆಲ್ಲರೂ” ಎಂಬಂತಾಗಿಬಿಟ್ಟಿದೆ ನಮ್ಮ ಈ ನಂಟು.
ಆ ದಿನ ನಾವು ಅಲ್ಲಿಗೆ ಸ್ವಲ್ಪ ತಡವಾಗಿ ತಲುಪಿ ಸಂಜೆ 4ರ ಹೊತ್ತಿಗೆ ನಮ್ಮ ಭೋಜನ ಮುಗಿಸಿದೆವು. ಅಲ್ಲಿಂದ ಹೊರಡುವಾಗ ಅದರ ಸಂಸ್ಥಾಪಕ ಶ್ರೀ ಮಧುಕರ್ ಶೆಟ್ಟಿ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು. ನಾನು ಅವರಿಗೆ ಧನ್ಯವಾದ ಹೇಳಿ, “ನಿಮಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ. ನಿಮ್ಮ ರೆಸ್ಟೋರೆಂಟ್ ನಮ್ಮ ಮ್ಯಾನೇಜರುಗಳ ತರಬೇತಿ ಸೆಷನ್‌ಗಳಲ್ಲಿ ಕೇಸ್ ಸ್ಟಡೀಸ್ (ಅಧ್ಯಯನ ಪ್ರಕರಣ) ಆಗಿದೆ’ ಎಂದೆ. “ನೀವು ಗುಣಮಟ್ಟ ಹಾಗೂ ಸ್ಥಿರವಾದ ಸೇವೆ ಕಾಯ್ದುಕೊಳ್ಳುವುದರಲ್ಲಿ ಪ್ರಮಾಣೀಕರಣದ ಮಟ್ಟವನ್ನು ಅದೆಂದೋ ಸಾಧಿಸಿಬಿಟ್ಟಿದ್ದೀರಿ. ಅಷ್ಟು ವರ್ಷಗಳಿಂದಲೂ ನೀವು ಪ್ರತಿಯೊಂದು ಖಾದ್ಯದ ರುಚಿಯನ್ನೂ ಹಾಗೆಯೇ ಉಳಿಸಿಕೊಂಡು ಬರುತ್ತಿರುವುದನ್ನು ನೋಡಿ ನಮಗೆ ಆಶ್ಚರ್ಯವಾಗುತ್ತಿದೆ” ಎಂದೂ ಹೇಳಿದೆ. ನಾನು ಹೇಳಿದ್ದನ್ನು ಹಸನ್ಮುಖದಿಂದ ಕೇಳಿಸಿಕೊಂಡ ಅವರು, “ನಾವು ಪ್ರತಿದಿನ ಬೆಳಿಗ್ಗೆ ಸ್ಯಾಂಪ್ಲಿಂಗ್ ಮಾಡಿ ಅಡುಗೆ ಪರಿಕರಗಳನ್ನು ತಪಾಸಣೆ ಮಾಡುತ್ತೇವೆ” ಎಂದರು. ಇದೊಂದು ಸರಳ ನಿಯಮವಾದರೂ ತುಂಬಾ ಪರಿಣಾಮಕಾರಿಯಾದುದಾಗಿದೆ.
ಗಜಲೀಗೆ ಸಂಬಂಧಿಸಿದಂತೆ ಗಮನಿಸಬೇಕಾದ ಮತ್ತೊಂದು ಸಂಗತಿಯೆAದರೆ, ಅದರ ಜಾಹೀರಾತು ಎಲ್ಲೂ ಕಾಣಸಿಗದು. ನಾನು ಎಲ್ಲಿಯೂ ಅದರ ಕುರಿತಾದ ಜಾಹೀರಾತು ಪ್ರಚಾರವನ್ನೇ ಕಂಡಿಲ್ಲ. ಆದರೂ ಅಲ್ಲಿ ವರ್ಷಪೂರ್ತಿಯೂ ಗ್ರಾಹಕರ ಜಂಗುಳಿ ಇದ್ದೇ ಇರುತ್ತದೆ. ಈ ಬಗ್ಗೆ ಅವರನ್ನು ಕೇಳಿದಾಗ, “ಜಾಹೀರಾತು ಪಕ್ಕಕ್ಕಿಡಿ. ನಾವು ಈ ರೆಸ್ಟೋರೆಂಟಿನ ಹೊರಗೆ ಒಂದು ನಾಮಫಲಕವನ್ನು ಸಹಿತ ಹಾಕಿಲ್ಲ. ಜನರು ಬರುತ್ತಾರೆ, ಆಹಾರ ಸವಿಯುತ್ತಾರೆ, ನಂತರ ತಮಗೆ ಗೊತ್ತಿರುವವರ ಬಳಿ ಹೇಳುತ್ತಾರೆ. ಅದು ನಮ್ಮಲ್ಲಿಗೆ ಗ್ರಾಹಕರನ್ನು ಹೊತ್ತುತರುತ್ತಿದೆ” ಎಂದರು. ಇದೊಂದು ಸರಳ ಸೂತ್ರವೇ ಹೌದು. ಆದರೆ ಬಹಳ ಪ್ರಭಾವಿಯಾದ ಸೂತ್ರವೂ ಆಗಿದೆ.
ಅದಾದಮೇಲೆ, “ಹೊರಗೆ ನಾಮಫಲಕ ಸಹಿತ ಹಾಕಿಲ್ಲ” ಎಂಬ ಅವರ ಆ ಒಂದು ಮಾತು ನನ್ನನ್ನು ಕಾಡಲು ಮೊದಲಾಯಿತು. ಆಗ ತಕ್ಷಣವೇ, “ನಮ್ಮ ಸೇಲ್ಸ್ ಕಚೇರಿಗಳಿಗೆ ನಾಮಫಲಕ ಇಲ್ಲದಿದ್ದರೆ ಏನಾದೀತು?” ಎಂಬ ಯೋಚನೆ ನನ್ನೊಳಗೆ ಹುಟ್ಟಿಕೊಂಡಿತು. ನಾವೂ ಹೀಗೆಯೇ ಮಾಡೋಣವೆಂದು ನಮ್ಮ ತಂಡದವರಿಗೆ ಸಲಹೆ ನೀಡಿದರೆ, ಅವರೆಲ್ಲರೂ ಪ್ರತಿಭಟಿಸಿಯೇ ತೀರುತ್ತಾರೆಂಬುದು ನನಗೆ ನಿಶ್ಚಿತವಾಗಿಯೂ ಗೊತ್ತು.- “ಇದು ಅಸಾಧ್ಯ. ಅಂತಹ ಸಲಹೆಯನ್ನು ನೀಡಲೇಬೇಡಿ!” ಎನ್ನುತ್ತಾರೆ ಅವರು. ನನಗೆ ಎಲ್ಲೋ ಸ್ವಲ್ಪ ಮತಿಭ್ರಮಣೆಯಾಗಿರಬೇಕು ಎಂದೂ ಅವರು ಅಂದುಕೊಳ್ಳಬಹುದು.
ಅಂದಂತೆ, ಲೋಗೋಗಳು, ಬ್ರ್ಯಾಂಡಿಂಗ್ ಹಾಗೂ ಸಾಮಾಜಿಕ ಮಾಧ್ಯಮಗಳ ಲೋಕಕ್ಕೆ ನಾವು ಹೊಸಬರೇ ಹೌದು. ಇನ್ನೂ ಬಹಳಷ್ಟು ಮಂದಿಗೆ ನಮ್ಮ ಹೆಸರಾಗಲೀ ಅಥವಾ ನಾವು ತೊಡಗಿರುವ ಚಟುವಟಿಕೆಯ ಬಗ್ಗೆಯಾಗಲೀ ಗೊತ್ತೇ ಇಲ್ಲವೆನ್ನಬಹುದು. ಹೀಗಾಗಿ, ನಾಮಫಲಕವನ್ನೇ ಹಾಕದಿದ್ದರೆ ನಮಗೆ ಏನೂ ಗಿಟ್ಟುವುದಿಲ್ಲ. ಜನರಿಗೆ ನಮ್ಮ ಬಗ್ಗೆ ಗೊತ್ತಾಗುವುದಾದರೂ ಹೇಗೆ?
ಈ ರೀತಿಯಾಗಿ ತರ್ಕಿಸಿ ನನ್ನೊಳಗೆ ಹುಟ್ಟಿದ ಮೇಲಿನ ಪ್ರಶ್ನೆಗೆ ತಕ್ಷಣವೇ ಉತ್ತರ ಕಂಡುಕೊAಡೆ.- “ನಮ್ಮ ಸೇಲ್ಸ್ ಆಫೀಸುಗಳಿಗೆ ನಾಮಫಲಕಗಳು ಇರಬೇಕು” ಎಂಬ ತೀರ್ಮಾನಕ್ಕೆ ಬಂದೆ.
ನನ್ನನ್ನು ಕಾಡಿದ ಎರಡನೇ ವಿಷಯವು ಇನ್ನಷ್ಟು ಜಟಿಲವಾಗಿತ್ತು: “ನಾವು ಜಾಹೀರಾತಿನ ಮೂಲಕ ಪ್ರಚಾರ ಮಾಡದಿದ್ದರೆ ಹೇಗೆ?” ಎಂಬುದರ ಕುರಿತಾಗಿತ್ತು ಅದು. ಆಗ ನಾವು ಪುಟಪೂರ್ತಿ ನೀಡುವ ಜಾಹೀರಾತು ಚಿತ್ರಣ ನನ್ನ ಕಣ್ಮುಂದೆ ಸುಳಿಯಿತು. ಮರುಕ್ಷಣವೇ, “ನಾವು ಇದನ್ನು ನಿಲ್ಲಿಸಿಬಿಟ್ಟರೆ ಪ್ರವಾಸಿಗರಿಗೆ ನಮ್ಮ ಹೊಸ ಪ್ರವಾಸ ಕಾರ್ಯಕ್ರಮಗಳ ಬಗ್ಗೆ ಹೇಗಾದರೂ ತಿಳಿಯುತ್ತದೆ?” ಎಂಬ ಮತ್ತೊಂದು ಪ್ರಶ್ನೆ ಮೂಡಿತು. ಜಾಹೀರಾತು ನೀಡುವುದೆಂದರೆ ನಮ್ಮ ಪಾಲಿಗೆ ಹೊಸ ಪ್ರವಾಸ ಕಾರ್ಯಕ್ರಮಗಳು ಲಭ್ಯ ಇವೆ ಎಂಬುದನ್ನು ಪ್ರಕಟಿಸುವುದಾಗಿರುತ್ತದೆ. ಹೀಗಾಗಿ, ನಾವು ಜಾಹೀರಾತು ನೀಡುವುದರಲ್ಲಿ ಅರ್ಥವಿದೆ ಎಂದು ನನಗೆ ಅನ್ನಿಸಿತು.
ಈ ತಾಕಲಾಟಗಳ ನಡುವೆಯೇ ನಮ್ಮ ಜಾಹೀರಾತುಗಳಲ್ಲಿ, “ಎಲ್ಲರಿಗಿಂತ ನಮ್ಮದು ಅತ್ಯುತ್ತಮ ಸೇವೆ” ಎಂಬಂತಹ ಉತ್ಪ್ರೇಕ್ಷಿತ ಪದಪುಂಜಗಳ ಬಳಕೆಗೆ ಕೆಲ ಸಮಯದ ಹಿಂದೆಯೇ ಲಗಾಮು ಹಾಕಿದೆವು. ಕೆಲವು ದೇಶಗಳಲ್ಲಿ ಇಂತಹ ಘೋಷಣೆಗಳಿಗೆ ನಿಷೇಧವೂ ಇದೆ. ನಮ್ಮ ದೇಶದಲ್ಲಿ ಅಂತಹ ಪದಪುಂಜಗಳ ಬಳಕೆಗೆ ಕಾನೂನುಬದ್ಧವಾಗಿ ಯಾವುದೇ ನಿರ್ಬಂಧವಿಲ್ಲದಿದ್ದರೂ ನೈತಿಕ ದೃಷ್ಟಿಯಿಂದಲೂ ಸರಿ ಇರಬೇಕು ಎಂಬ ನಮ್ಮ ನಿರ್ಧಾರಕ್ಕೆ ಅನುಗುಣವಾಗಿ ಅಂತಹ ನುಡಿಗಟ್ಟುಗಳ ಬಳಕೆಯನ್ನು ನಾವು ಕೈಬಿಟ್ಟೆವು. “ನಮ್ಮ ಸೇವೆಯೇ ಅತ್ಯುತ್ತಮ” ಎಂದು ನಾವು ಏಕಾದರೂ ಹೇಳಿಕೊಳ್ಳಬೇಕು? ಅದಕ್ಕೆ ಬದಲಾಗಿ, ಇರುವ ವಾಸ್ತವಾಂಶಗಳನ್ನು ಜನರ ಮುಂದಿರಿಸೋಣ. ಮುಂದಿನದನ್ನು ಅವರೇ ತೀರ್ಮಾನಿಸಲಿ ಎಂದುಕೊಂಡೆವು. ‘ನಮ್ಮ ಸೇವಾ ಗುಣಮಟ್ಟ ಉತ್ತಮವಾಗಿದ್ದರೆ ಜನ ಮತ್ತೆ ಬರುತ್ತಾರೆ, ಇಲ್ಲದಿದ್ದರೆ ಬರುವುದಿಲ್ಲ. ಅದೇ ವಾಸ್ತವ’ ಎಂದು ದೃಢ ಮನಸ್ಸು ಮಾಡಿದೆವು.
ಜೊತೆಗೆ, ನಾವು ನೀಡುವ ಜಾಹೀರಾತುಗಳಲ್ಲಿ ನಮ್ಮ ಮೂರು ನಿಯಮಗಳನ್ನು ದೃಢವಾಗಿ ಘೋಷಿಸುತ್ತೇವೆ. ಅವು ಯಾವುವೆಂದರೆ:
ಯಾವುದೇ ರಿಯಾಯಿತಿ ಇಲ್ಲ.
ಯಾವುದೇ ಐಚ್ಛಿಕ ಆಯ್ಕೆಗೆ ಅವಕಾಶ ಇಲ್ಲ.
ನಗದು ವ್ಯವಹಾರ ಇಲ್ಲ.
ಹೌದು, ಇದೊಂದು ದಿಟ್ಟ ನಿರ್ಧಾರವೇ ಸೈ. ರಿಯಾಯಿತಿಗಳು, ಬೋನಸ್‌ಗಳು ಹಾಗೂ ಲಾಯಲ್ಟಿ ಸ್ಕೀಮುಗಳ ಭರಾಟೆಯ ಮಾರುಕಟ್ಟೆಯಲ್ಲಿ ನಾವು ಯಾವುದೇ ರಿಯಾಯಿತಿ ಇಲ್ಲ ಎಂದು ಘೋಷಿಸಿದೆವು. ಮೂಲದರದ ಪ್ರವಾಸ ಕಾರ್ಯಕ್ರಮವೊಂದನ್ನು ರೂಪಿಸಿ ತದನಂತರ ನಮ್ಮ ಅತಿಥಿಗಳಿಗೆ ಐಚ್ಛಿಕ ಆಯ್ಕೆಗಳ ಒತ್ತಡ ಹೇರುವುದು ನಮಗೆ ಸರಿಯೆಂದು ತೋರಿಬರಲಿಲ್ಲ. ಈ ವಿಷಯದಲ್ಲಿ ನಾವು ಅಲಿಖಿತ ನಿಯಮವೊಂದನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ: “ನಮ್ಮ ಪ್ರವಾಸ ಕಾರ್ಯಕ್ರಮಗಳು, ನೋಡಲೇಬೇಕಾದ ತಾಣಗಳೆಲ್ಲವನ್ನೂ ಮೂಲ ದರದಲ್ಲಿಯೇ ತೋರಿಸುವಂತೆ ಇರಬೇಕು” ಎಂಬುದೇ ಆ ನಿಯಮವಾಗಿದೆ. ಅದರ ಬಗ್ಗೆ ಇಲ್ಲಿ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎನ್ನಿಸುತ್ತದೆ.
ಇನ್ನು, ‘ನಗದು ವ್ಯವಹಾರ ಇಲ್ಲ’ ಎಂಬುದು ನಮ್ಮ ಮೂರನೇ ನಿಯಮವಾಗಿದೆ. ನಗದು ವ್ಯವಹಾರ ಹೆಚ್ಚಾಗಿ ನಡೆಯುವ ಭಾರತದಂತಹ ದೇಶದಲ್ಲಿ ಇದು ಕೂಡ ದಿಟ್ಟ ನಿರ್ಧಾರವೇ ಸರಿ. ಬಹಳಷ್ಟು ಚರ್ಚೆಯ ನಂತರ, ‘ವೀಣಾ ವರ್ಲ್ಡ್’ನಲ್ಲಿ ನಗದು ವ್ಯವಹಾರ ಇರುವುದಿಲ್ಲ ಎಂದು ನಾವು ನಿರ್ಧರಿಸಿ, ಅದನ್ನು ಹೆಮ್ಮೆಯಿಂದ ನಮ್ಮ ಜಾಹೀರಾತಿನಲ್ಲಿ ಸೇರ್ಪಡೆಗೊಳಿಸಿ ಪ್ರಕಟಿಸುತ್ತಾ ಬರುತ್ತಿದ್ದೇವೆ.
ನಮ್ಮ ಈ ನಿರ್ಧಾರದಿಂದಾಗಿ ಕೆಲವಷ್ಟು ಬುಕಿಂಗ್‌ಗಳು ಕೈತಪ್ಪುತ್ತವೆ ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಿದೆ. ವ್ಯವಹಾರದ ದೃಷ್ಟಿಯಿಂದ ಅದು ನಷ್ಟವೂ ಹೌದು. ಅದೇನೇ ಇದ್ದರೂ, ಆ ನಿರ್ಧಾರ ಕೈಗೊಂಡ ನಾಲ್ಕು ವರ್ಷಗಳಾದ ಮೇಲೂ ಈ ನೀತಿಯನ್ನು ಕೈಬಿಡಬೇಕು ಎಂದು ನಮಗೆ ಯಾವ ಕ್ಷಣದಲ್ಲೂ ಅನ್ನಿಸಿಯೇ ಇಲ್ಲ.
ಕಾಲಾನುಕ್ರಮದಲ್ಲಿ ಒಂದು ಚಿಂತನೆ ಹೆಚ್ಚೆಚ್ಚು ಗಟ್ಟಿಯಾಗುತ್ತಿದೆ. “ನಾವು ಸೇವಾ ಗುಣಮಟ್ಟದ ಬಗ್ಗೆ ಗಮನ ಕೇಂದ್ರೀಕರಿಸಬೇಕು” ಎನ್ನುವುದೇ ಆ ಚಿಂತನೆಯಾಗಿದೆ. ನಾವು ನಮ್ಮ ಲೋಪಗಳನ್ನು ನಿವಾರಿಸಿಕೊಂಡು ಸುಧಾರಣೆಗೊಳ್ಳುತ್ತಾ ಸಾಗಬೇಕು. ನಮ್ಮೊಂದಿಗೆ ಕೈಗೊಂಡಿದ್ದ ಈ ಮುಂಚಿನ ಪ್ರವಾಸ ಚೆನ್ನಾಗಿತ್ತು ಎಂಬ ಕಾರಣಕ್ಕಾಗಿ ಪ್ರವಾಸಿಗರು ನಮ್ಮಲ್ಲಿಗೆ ಮತ್ತೊಮ್ಮೆ ಹಿಂದಿರುಗಿ ಬರಬೇಕು. ಇಂತಹ ಪರಿಸ್ಥಿತಿಯು, ಉತ್ತಮ ಸೇವೆಯನ್ನು ಲಭ್ಯವಾಗಿಸುವ ಧ್ಯೇಯದೊಂದಿಗೆ ನಮ್ಮನ್ನು ಸದಾ ತುದಿಗಾಲಲ್ಲಿ ನಿಲ್ಲಿಸಲು ದೊಡ್ಡ ಸ್ಫೂರ್ತಿಯಾಗುತ್ತದೆ.
ನಾವು ಉದಾಸೀನಕ್ಕೆ ಆಸ್ಪದವನ್ನೇ ನೀಡಬಾರದು. ನಾವು ಯೋಜಿಸುವ ಇಂದಿನ ಪ್ರವಾಸ ಉತ್ತಮವಾಗಿದ್ದರೆ ನಾಳೆಯ ನಮ್ಮ ಬುಕಿಂಗ್ ಖಾತರಿ ಇರುತ್ತದೆ. “ವೀಣಾ ವರ್ಲ್ಡ್”ನಲ್ಲಿ ಈ ಮನಃಸ್ಥಿತಿ ಹೆಚ್ಚಾದಷ್ಟೂ ನಮ್ಮ ಸೇವೆಗಳು ಉತ್ತಮವಾಗಿರುತ್ತವೆ.
ಇಂತಹ ಧೋರಣೆಯಿದ್ದಾಗ ಮಾತ್ರವೇ ಯಾವುದೇ ವೃತ್ತಿಯಲ್ಲಿ, ವ್ಯಾಪಾರೋದ್ಯಮದಲ್ಲಿ ಹಾಗೂ ಜಾಗತೀಕರಣದ ಪ್ರಪಂಚದಲ್ಲಿ ಉಳಿದು ಬೆಳೆಯಲು ಸಾಧ್ಯವಾಗುತ್ತದೆ.
ಅಂದಹಾಗೆ, ಈಗಲೂ ನಾನು ನಾಮಫಲಕಗಳು ಅಥವಾ ಜಾಹೀರಾತುಗಳಿಲ್ಲದೆ ‘ವೀಣಾ ವರ್ಲ್ಡ್’ಅನ್ನು ಕಲ್ಪಿಸಿಕೊಳ್ಳಲು ಸಿದ್ಧನಿಲ್ಲ.
ಲ್ಯಾಂಬೊರ್ಗಿನಿ, ರೋಲ್ಸ್-ರಾಯ್ಸ್ನಂತಹ ಐಷಾರಾಮಿ ಕಾರಿನ ಬ್ರ‍್ಯಾಂಡುಗಳು ಜಾಹೀರಾತು ಪ್ರಚಾರವನ್ನೇ ಮಾಡುವುದಿಲ್ಲ. ಏಕೆ ಗೊತ್ತಲ್ಲವೇ? ಅವುಗಳನ್ನು ಖರೀದಿಸುವ ಗ್ರಾಹಕರು ಜಾಹೀರಾತುಗಳನ್ನಾಗಲೀ ಅಥವಾ ಟಿ.ವಿ.ಯನ್ನಾಗಲೀ ನೋಡುವ ಹವ್ಯಾಸ ಹೊಂದಿರುವುದಿಲ್ಲ. ಅಂತಹವರ ಬಳಿ ಕೆಲಸ ಮಾಡುವ ಅಧಿಕಾರಿಗಳೇ ಈ ಮಾತನ್ನು ಹೇಳುತ್ತಾರೆ. ತಮಾಷೆಯ ಧಾಟಿಯಲ್ಲಿ ಹೇಳುವುದಾದರೆ, “ಲ್ಯಾಂಬೊರ್ಗಿನಿಯನ್ನು ಕೊಳ್ಳುವಷ್ಟು ಹಣವನ್ನು ಸಂಪಾದಿಸುವುದು ನಿಮ್ಮ ಗುರಿಯಾಗಿದ್ದರೆ ಟಿ.ವಿ. ನೋಡುತ್ತಾ ಕಾಲಹರಣ ಮಾಡಬೇಡಿ” ಎಂದೇ ಹೇಳಬಹುದು.
ಜಾಗತಿಕ ಗುಣಮಟ್ಟದ ಇನ್ನೂ ಹಲವು ಬ್ರ್ಯಾಂಡುಗಳು ಕೂಡ ಯಾವುದೇ ಜಾಹೀರಾತು ನೀಡುವುದಿಲ್ಲ:
‘ಜಾರಾ’ ಯಾವುದೇ ಜಾಹೀರಾತುಗಳ ಮೊರೆ ಹೋಗದೆ ಪ್ರೈಮ್ ಪ್ರದರ್ಶನ ಮಳಿಗೆಗಳ ಸ್ಥಾಪನೆಗೆ ಒತ್ತು ನೀಡುತ್ತದೆ. ಗ್ರಾಹಕರು ನೇರವಾಗಿ ಬಂದು ಉತ್ಪನ್ನಗಳನ್ನು ಖುದ್ದು ಅನುಭವಿಸಲಿ ಎಂಬುದು ಅದರ ತತ್ತ್ವವಾಗಿದೆ.
ಇಲಾನ್ ಮಸ್ಕ್ ಅವರು ಟೆಸ್ಲಾದಲ್ಲಿ ಮಾರ್ಕೆಟಿಂಗ್ ವಿಭಾಗವನ್ನೇ ತೆಗೆದುಹಾಕಿದ್ದಾರೆ. ಆಗೊಮ್ಮೆ ಈಗೊಮ್ಮೆ ಟ್ವೀಟ್ ಮಾಡುವುದನ್ನು ಬಿಟ್ಟರೆ ಟೆಸ್ಲಾಗೆ ಬೇರೆ ಯಾವ ಜಾಹೀರಾತು ಬೆಂಬಲವೂ ಇಲ್ಲ. ಆದರೂ ಅದಕ್ಕೆ ಯಾವಾಗಲೂ ಅತ್ಯಧಿಕ ಬೇಡಿಕೆಯೇ ಕಂಡುಬರುತ್ತದೆ.
ಶ್ರೀರಾಚಾ ಸಾಸ್ ಒಂದೇ ಒಂದು ಜಾಹೀರಾತು ಪ್ರಕಟಿಸದೆ ವಾರ್ಷಿಕ 2 ಕೋಟಿ ಬಾಟಲಿಗಳಿಗೂ ಮಿಕ್ಕು ಬಿಕರಿಯಾಗುತ್ತದೆ.
ಟಪ್ಪರ್‌ವೇರ್ ಕಂಪನಿಯು ಜಾಹೀರಾತಿಗೆ ಬದಲಾಗಿ ಪಾರ್ಟಿಗಳು ಹಾಗೂ ಬಾಯಿಮಾತಿನ ಪ್ರಚಾರವನ್ನೇ ನೆಚ್ಚಿಕೊಂಡು ಯಶಸ್ಸು ಕಂಡಿದೆ.
ಭಾರತದ ನ್ಯಾಚುರಲ್ ಐಸ್ ಕ್ರೀಮ್ ಕೂಡ ಜಾಹೀರಾತು ನೀಡುವುದು ಬಹಳ ಅಪರೂಪ. ಅದು ತನ್ನ ನ್ಯಾಚುರಲ್ (ನೈಸರ್ಗಿಕ ಸ್ವಾದದ) ಎಂಬ ಆಶ್ವಾಸನೆಗೆ ಬದ್ಧವಾಗಿರಲು ಗಮನ ಕೇಂದ್ರೀಕರಿಸುತ್ತದೆ.
ಟಿಕ್ ಟಾಕ್ ಕೂಡ ರೂಢಿಗತ ಮಾರ್ಕೆಟಿಂಗ್ ಇಲ್ಲದೆ ಜಾಗತಿಕವಾಗಿ ಮುಂಚೂಣಿಗೆ ಬಂದಿದೆ.
ಆನ್‌ಲೈನ್ ವಲಯದಲ್ಲೂ ಇಂತಹ ಹಲವಾರು ನಿದರ್ಶನಗಳಿವೆ. ಉತ್ಪನ್ನ ಹಾಗೂ ಸೇವಾ ಗುಣಮಟ್ಟವೇ ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗುತ್ತದೆ. ಈ ಉದಾಹರಣೆಗಳ ಹಿಂದಿರುವ ಕತೆಗಳು ಸ್ಫೂರ್ತಿದಾಯಕವೂ ಬೋಧಪ್ರದವೂ ಆಗಿವೆ.
ಇನ್ನು ಕೆಲವಷ್ಟು ಉತ್ಪನ್ನಗಳ ಜಾಹೀರಾತು ಪ್ರಚಾರಕ್ಕೆ ಕಾನೂನುಬದ್ಧ ನಿಷೇಧವೇ ವಿಧಿತವಾಗಿದೆ. ಮದ್ಯದ ಬ್ರ್ಯಾಂಡುಗಳು, ಜೂಜು, ತಂಬಾಕು ಇತ್ಯಾದಿ ಇಂಥವುಗಳಲ್ಲಿ ಸೇರಿವೆ. ಆದರೆ ಪರೋಕ್ಷ ಗೋಚರ ಅಥವಾ “ಆರೋಗ್ಯಕ್ಕೆ ಹಾನಿಕರ” ಎಂಬ ನಿರಾಕರಣೆ ಘೋಷಣೆಗಳ ಮೊರೆಹೋಗಿ ಈ ಉತ್ಪನ್ನಗಳು ವ್ಯಾಪಾರ ಲೋಕದಲ್ಲಿ ಮುಂಚೂಣಿಯಲ್ಲಿವೆ. ಇದೇ ವೇಳೆ, ಕೆಲವು ಸೆಲೆಬ್ರಿಟಿಗಳು ಅಂತಹ ಉತ್ಪನ್ನಗಳನ್ನು ದೃಢೀಕರಿಸಲು ನಿರಾಕರಿಸುವುದನ್ನು ನಾವು ಮೆಚ್ಚಲೇಬೇಕು. ‘ಹಣವೇ ಎಲ್ಲವೂ ಅಲ್ಲ. ಮೌಲ್ಯಗಳು ಮುಖ್ಯ’ ಎಂಬುದನ್ನು ಅಂಥವರು ನೆನಪಿಸುತ್ತಾರೆ.
ಇವೆಲ್ಲದರ ನಡುವೆ, “ಲೋಗೋ ಇಲ್ಲದೆ, ನಾಮಫಲಕವಿಲ್ಲದೆ ಅಥವಾ ಜಾಹೀರಾತು ಇಲ್ಲದೆ ಯಾವುದಾದರೊಂದು ಬ್ರ‍್ಯಾಂಡ್ ಬೆಳೆಯಲು ಸಾಧ್ಯವೇ?” ಎಂಬ ಪ್ರಶ್ನೆ ನನ್ನ ಮನಸ್ಸನ್ನು ಹೊಕ್ಕಿದೆ.
ಯಾವುದೇ ಬ್ರ‍್ಯಾಂಡ್ ಆದರೂ ಅದು ಜನರ ಹೃದಯದಲ್ಲಿ ಪ್ರತಿಷ್ಠಾಪಿತವಾಗಬೇಕು ಎಂಬುದೇ ನಿಜವಾದ ಗುರಿಯಾಗಿರುತ್ತದೆ. ನಿಜವಾದ ಬ್ರ್ಯಾಂಡಿಂಗ್ ಎಂಬುದು ಆಂತರ್ಯಕ್ಕೆ, ಅಂದರೆ ಭಾವನಾತ್ಮಕತೆಗೆ, ಅನುಭವಕ್ಕೆ ಹಾಗೂ ಮರೆಯಲಾಗದ ನೆನಪುಗಳಿಗೆ ಸಂಬAಧಿಸಿದ್ದು.
ಅದು ಸಾಧ್ಯವಾಗಬೇಕೆಂದರೆ ನಾವು ಉತ್ಕೃಷ್ಟತೆಗೆ ಕಟಿಬದ್ಧವಾಗಿರಬೇಕು. ಅದನ್ನೇ ಸಂಕ್ಷಿಪ್ತವಾಗಿ, “ಕರ್ಮಣ್ಯೇವಾಧಿಕಾರಸ್ಥೇ”, ಅಂದರೆ, ಕಾಯಕದ ಮೇಲೆ ಚಿತ್ತ ನೆಡುವುದು ಎನ್ನಬಹುದು.
Post your Comment
Please let us know your thoughts on this story by leaving a comment.