Travel Planner 2025
Travel Planner 2025
IndiaIndia
WorldWorld
Our Toll Free Numbers:

1800 313 5555

You can also call us on:

+91 22 2101 7979

+91 22 2101 6969

Foreign Nationals/NRIs travelling

Within India+91 915 200 4511

Outside India+91 887 997 2221

Business hours: 10AM - 7PM

Our Toll Free Numbers:

1800 313 5555

You can also call us on:

+91 22 2101 7979

+91 22 2101 6969

Foreign Nationals/NRIs travelling

Within India+91 915 200 4511

Outside India+91 887 997 2221

Business hours: 10AM - 7PM

Explore Topics, Tips & Stories

Balloon
Arrow
Arrow

ಟ್ಯೂನಿಸಿಯಾ: ಆಫ್ರಿಕಾ-ಮೆಡಿಟರೇನಿಯನ್ ಸಂಗಮ ತಾಣ

7 mins. read

Published in the Sunday Prajavani on 01 September 2024

ಮೆಡೀನಾದ ರಸ್ತೆಗಳಲ್ಲಿ ಅಡ್ಡಾಡುತ್ತಿರುವಾಗ ನನಗೆ ಕಲ್ಪಿತ ಲೋಕಕ್ಕೆ ಕಾಲಿಟ್ಟಿದ್ದೀನೇನೋ ಎಂದು ಭಾಸವಾಗತೊಡಗಿತು. ಯಾವ ಅಂಗಡಿ ನೋಡಿದರೂ ಅದರ ತುಂಬೆಲ್ಲಾ ನೆಲಹಾಸುಗಳು, ರಗ್ಗುಗಳು, ದೀಪಗಳು, ಕಂಚಿನ ಪಾತ್ರೆ ಪಗಡಿಗಳು, ಪಿಂಗಾಣಿ ವಸ್ತುಗಳು, ಚರ್ಮೋತ್ಪನ್ನಗಳು, ಜನರ ಕೈಯಲ್ಲಿದ್ದ  ಬ್ಯಾಗುಗಳಲ್ಲಿ, ಆಯ್ದು ಖರೀದಿಸಿದ್ದ ಅಗ್ಗದ ಬೆಲೆಯ ಪುಟಾಣಿ ಆಭರಣಗಳು ಹಾಗೂ ಇನ್ನಿತರ ಸುಂದರ ವಸ್ತುಗಳು. ನಾನು ಹೆಚ್ಚು ಕಡಿಮೆ ಪ್ರತಿಯೊಂದು ಮಳಿಗೆ ಮುಂದೆಯೂ ನಿಂತು ಅಲ್ಲಿದ್ದವುಗಳ ಮೇಲೆಲ್ಲಾ ಕಣ್ಣಾಡಿಸುತ್ತಿದ್ದೆ. ಹೀಗಾಗಿ, ಈ ದೇಶದ ನನ್ನ ಭೇಟಿಯು ಅಂದುಕೊಂಡಿದ್ದಕ್ಕಿಂತ ಹೆಚ್ಚು ದಿನ ಹಿಡಿಯುತ್ತದೆ ಎಂದು ನನಗೆ ಆಗಲೇ ಸ್ಪಷ್ಟವಾಗಿತ್ತು. ಅಂದಂತೆ, ನಾನು ಇಲ್ಲಿ ಹೇಳುತ್ತಿರುವುದು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಟ್ಯೂನಿಸಿಯಾದ ರಾಜಧಾನಿ ನಗರವಾದ ಟ್ಯೂನಿಸ್‌ನ ಮೆಡೀನಾದ ಬಗ್ಗೆ. ಯಾವುದೇ ಆತುರವಿಲ್ಲದೆ ಈ ಚಿತ್ತಾಕರ್ಷಕ ನಗರವನ್ನು ನಿಧಾನವಾಗಿ ಅನ್ವೇಷಿಸಬೇಕೆಂದು ನಾನು ನಿರ್ಧರಿಸಿದ್ದೆ.

ಅಲ್ಲಿನ ಇಂತಹ ಅಂಗಡಿಗಳ ನಡುನಡುವೆ ವಿಚಿತ್ರ ಎನ್ನಿಸುವಂತೆ ಕೆಫೆಗಳು ಇವೆ. ಇಂತಹ ಕೆಫೆಗಳಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಕುಳಿತು, ಉಲ್ಲಾಸ ಮೂಡಿಸುವ ಪುದೀನಾ ಚಹಾ ಗುಟುಕರಿಸುತ್ತಿರುತ್ತಾರೆ. ಟ್ಯೂನಿಸಿಯಾದಲ್ಲಿ ಸೇವಿಸುವ ಅತ್ಯಂತ ಸಾಮಾನ್ಯ ಚಹಾ ಎಂದರೆ ಅದು "ನಾನಾ" ಅಥವಾ ಮಿಂಟ್ ಚಹಾ ಎಂಬುದು ನನಗೆ ಅಲ್ಲಿ ಗೊತ್ತಾಯಿತು. ಗ್ರೀನ್ ಟೀ ಎಲೆಗಳಿಗೆ ತಾಜಾ ಪುದೀನಾ ಎಲೆಗಳನ್ನು ಸೇರಿಸಿ ಕಷಾಯ ಸಿದ್ಧಪಡಿಸಿ, ಅದಕ್ಕೆ ಸಕ್ಕರೆ ಸೇರಿಸಿ ಈ ಚಹಾ ತಯಾರಿಸಲಾಗುತ್ತದೆ. ಈ ಉಲ್ಲಾಸದಾಯಕ ಹಾಗೂ ಪರಿಮಳಭರಿತ ಚಹಾವನ್ನು ಅಲ್ಲಿನ ಜನ  ದಿನವಿಡೀ ಆಗಾಗ ಪುಟ್ಟ ಲೋಟ ಹಿಡಿದು ಹೀರುತ್ತಲೇ ಇರುತ್ತಾರೆ. ಜೊತೆಗೆ ಒಂದಷ್ಟು ಬೀಜಗಳು, ಒಣಹಣ್ಣುಗಳು ಅಥವಾ ಪೇಸ್ಟ್ರಿಗಳು ಕೂಡ ಇರುತ್ತವೆ. ನಾನು ಕೂಡ ಚಹಾ ಸವಿಯಲು ಸೂಕ್ತ ಜಾಗ ಹುಡುಕುತ್ತಾ ಅಲ್ಲಿನ ಟೀ ಹೌಸ್ ನ ಗೋಡೆಯಲ್ಲಿನ ಸಣ್ಣ ರಂಧ್ರದ ಮೂಲಕ ಕಂಡ ಮೆಟ್ಟಿಲುಗಳನ್ನು ಅನುಸರಿಸುತ್ತಾ ಹೆಜ್ಜೆಗಳನ್ನು ಇಡುತ್ತಾ ಹೋದೆ. ಮೇಲೆ ಹೋಗುತ್ತಿದ್ದಂತೆ ಅತ್ಯಂತ ವರ್ಣಮಯವಾದ ತೆರೇಸ್ ನ ದರ್ಶನ ನನಗಾಯಿತು! ಪಿಂಗಾಣಿ ಕಲಾಕೃತಿಗಳು ಹಾಗೂ ಆಕರ್ಷಕ ಪೀಠೋಪಕರಣಗಳಿಂದ ಅಲಂಕೃತವಾದ ಮೆಡೀನಾದ ರೂಫ್ ಟಾಪ್ ಗಳು ಟ್ಯೂನಿಸ್ ನ ನಿಗೂಢ ಭಂಡಾರಗಳು ಎಂದೇ ಹೇಳಬಹುದು.

ಟ್ಯೂನಿಸಿಯಾ ಗೆ ನಾನು ಪ್ರವಾಸ ಹೊರಡಲು ತೀರ್ಮಾನಿಸಿದಾಗ ಹಲವರು ನನ್ನ ಆಯ್ಕೆಯ ಬಗ್ಗೆ ಕೇಳಿದರು. ನನ್ನ ಮಟ್ಟಿಗೆ ಹೇಳುವುದಾದರೆ, ಟ್ಯೂನಿಸಿಯಾವು ಹೊಸ ದೇಶವೊಂದನ್ನು ನೋಡಬೇಕೆಂಬ ಸೆಳೆತವನ್ನು ನನ್ನಲ್ಲಿ ಉಂಟುಮಾಡಿತ್ತು. ನೂತನ ತಾಣವೆಂಬ ಕುತೂಹಲದ ಜೊತೆಗೆ 100 ದೇಶಗಳಿಗೆ ಭೇಟಿ ಕೊಟ್ಟ ಮೈಲುಗಲ್ಲು ಮುಟ್ಟುವ ಅವಕಾಶವನ್ನು ಕೂಡ ಅದು ನನ್ನ ಮುಂದಿರಿಸಿತ್ತು. ಟ್ಯೂನಿಸಿಯಾವು ಸಮೃದ್ಧ ಸಂಸ್ಕೃತಿ, ಇತಿಹಾಸ, ಸಮುದ್ರ ದಂಡೆಗಳಿಂದ ಹಿಡಿದು ಮರಳುಗಾಡಿನವರೆಗಿನ ವೈವಿಧ್ಯಮಯ ಭೂಪ್ರದೇಶ, ಸುಂದರ ಹಳ್ಳಿಗಳು, ಸೊಬಗಿನ ನಗರಗಳು ಹಾಗೂ ಉತ್ತಮ ಆಹಾರ ಇವೆಲ್ಲವನ್ನೂ ಒಳಗೊಂಡ ದೇಶವಾಗಿದೆ. ಒಡಲಲ್ಲಿ ಅಷ್ಟೆಲ್ಲಾ ವೈವಿಧ್ಯ ಇರಿಸಿಕೊಂಡಿರುವ ಅಂತಹ ದೇಶವೊಂದನ್ನು ಮೊದಲ ಬಾರಿಗೆ ಅನ್ವೇಷಿಸುವ ಕಾತರ ಕೂಡ ನನ್ನಲ್ಲಿ ಇಣುಕುತ್ತಿತ್ತು!

"ಸರಿ, ಟ್ಯೂನಿಸಿಯಾವೇ ಏಕೆ?"- ಎಂದು ನೀವು ಕೂಡ ಕೇಳಬಹುದು. ನನಗೆ ಆಸಕ್ತಿ‌ ಮೂಡಿಸಿದ ಅಂಶವೆಂದರೆ, ಇದು ಮೆಡಿಟರೇನಿಯನ್ ಸಮುದ್ರವು ಆಫ್ರಿಕಾವನ್ನು ಸಂಧಿಸುವ ಪ್ರದೇಶ! ಹಾಗೆ ನೋಡಿದರೆ, ಆಫ್ರಿಕಾ ಖಂಡವೇ ಬೆರಗು ಹುಟ್ಟಿಸುವ ವೈವಿಧ್ಯಮಯ ಭೂಪ್ರದೇಶವಾಗಿದೆ. ಮಳೆಕಾಡುಗಳಿಂದ ಹಿಡಿದು ಮರುಭೂಮಿಗಳವರೆಗೆ, ಸವನ್ನಾ ಹುಲ್ಲುಗಾವಲುಗಳಿಂದ ಹಿಡಿದು ಪರ್ವತಗಳವರೆಗೆ, ಮುಂದುವರಿದು ಕಡಲ ತೀರಗಳವರೆಗೆ ಇಲ್ಲಿ ಕಣ್ಣಿಗೆ ನಿಲುಕುವ ನೋಟಗಳು ವಿಭಿನ್ನ. ಉತ್ತರ ಆಫ್ರಿಕಾದಲ್ಲಿರುವ ಟ್ಯೂನಿಸಿಯಾವು ಮೆಡಿಟರೇನಿಯನ್ ಸಾಗರದಂಚಿಗೆ ಹೊಂದಿಕೊಂಡಿರುವ, ಪಶ್ಚಿಮದಲ್ಲಿ ಅಲ್ಜೀರಿಯಾ ಹಾಗೂ ಆಗ್ನೇಯದಲ್ಲಿ ಲಿಬಿಯಾ ದೇಶಗಳನ್ನು ಗಡಿಯಾಗಿ ಹೊಂದಿರುವ ನಾಡಾಗಿದೆ. ಮೊರೊಕ್ಕೋ, ಅಲ್ಜೀರಿಯಾ, ಲಿಬಿಯಾ ಮತ್ತು ಮೌರಿತಾನಿಯಾ ದೇಶಗಳನ್ನು ಒಳಗೊಂಡ ಮಗ್ರೆಬ್ ರಾಷ್ಟ್ರಗಳ ಕೂಟದ ಸದಸ್ಯ ರಾಷ್ಟ್ರವಾದ ಟ್ಯೂನಿಸಿಯಾವು ಬೆರ್ಬೆರ್ ಗಳ ನೆಲೆ ಕೂಡ ಹೌದು. “ಅಮಝಿಗ್” ಎಂದೂ ಕರೆಯಲ್ಪಡುವ ಬೆರ್ಬೆರ್ ಗಳು ಟ್ಯೂನಿಸಿಯಾ ಸೇರಿದಂತೆ ಉತ್ತರ ಆಫ್ರಿಕಾ ಮೂಲದ  ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಸಮೃದ್ಧ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯುಳ್ಳ ಬೆರ್ಬೆರ್ ಗಳು ಈ ಪ್ರದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ನೆಲಸಿದ್ದಾರೆ. ಆ ಮೂಲಕ ಟ್ಯೂನಿಸಿಯಾದ ಚರಿತ್ರೆ, ಭಾಷೆ ಮತ್ತು ರೀತಿರಿವಾಜುಗಳ ಮೇಲೆ ಅಳಿಸಲಾಗದ ಮುದ್ರೆ ಒತ್ತಿದ್ದಾರೆ. ತಮ್ಮ ಕ್ಷಮತೆ ಹಾಗೂ ಒಗ್ಗಿಕೊಳ್ಳುವ ಗುಣಕ್ಕೆ ಹೆಸರಾದ ಬೆರ್ಬೆರ್ ಗಳು ಹಲವಾರು ಆಕ್ರಮಣಕಾರರು ಹಾಗೂ ನಾಗರಿಕತೆಗಳ ಶತಮಾನಗಳಷ್ಟು ಅವಧಿಯ ಪ್ರಭಾವಗಳ ನಡುವೆಯೂ ತಮ್ಮ ವಿಶೇಷ ಪದ್ಧತಿಗಳು, ಆಚರಣೆಗಳು ಹಾಗೂ ಭಾಷೆಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ.

ಈ ಜನಾಂಗದವರು ಸಾಂಪ್ರದಾಯಿಕ ಜೀವನ ಪದ್ಧತಿ  ಅನುಸರಿಸುತ್ತಾ, ಕೃಷಿ, ಪಶುಸಂಗೋಪನೆ ಮತ್ತು ಕುಶಲಕಲೆಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುತ್ತಾ ಬಂದಿದ್ದಾರೆ. ಬೆರ್ಬೆರ್ ಹಳ್ಳಿಗಳು ತಮ್ಮದೇ ವಿಶಿಷ್ಟ ವಾಸ್ತುವಿನ್ಯಾಸ ಹಾಗೂ ತೆರೇಸ್ ಗಳಿಂದ ಕೂಡಿದ್ದು ಪ್ರಕೃತಿ ಹಾಗೂ ಸಮುದಾಯದೊಂದಿಗೆ ಸಾಮರಸ್ಯದಿಂದ ಆಳವಾಗಿ ಬೇರೂರಿದ ಬದುಕಿನ ಶೈಲಿಯನ್ನು ಸೂಚಿಸುತ್ತವೆ. ಸಂಗೀತ, ನೃತ್ಯ ಹಾಗೂ ಹಬ್ಬಗಳು ಬೆರ್ಬೆರ್ ಸಮುದಾಯದ ಅವಿಭಾಜ್ಯ ಅಂಗವಾಗಿದ್ದು ಈಗಲೂ ವೈಭವಯುತ ಆಚರಣೆಯಿಂದ  ಪರಂಪರೆಯ ಚೈತನ್ಯವನ್ನು ಬಿಂಬಿಸಿ ಗಮನ ಸೆಳೆಯುತ್ತವೆ.

ಇತಿಹಾಸವು ಕಾಲಪ್ರವಾಹದಲ್ಲಿ ಕ್ರಮೇಣವಾಗಿ ಸ್ಥಳವೊಂದರ ಭೌಗೋಳಿಕತೆ ಹಾಗೂ ವಾಸ್ತು-ಸಂರಚನೆಯನ್ನು ಮರು ವಿನ್ಯಾಸಗೊಳಿಸುತ್ತಾ ಸಾಗುತ್ತದೆ ಎಂದು ನನಗೆ ಆಗಾಗ ಅನ್ನಿಸುತ್ತಿರುತ್ತದೆ. ಟ್ಯೂನಿಸಿಯಾದ ಆಯಕಟ್ಟಿನ ಭೌಗೋಳಿಕ ನೆಲೆಯು ಅದನ್ನು ಐತಿಹಾಸಿಕವಾಗಿ ನಾಗರಿಕತೆಗಳ ಕವಲುದಾರಿಯಲ್ಲಿ ಇರಿಸಿದೆ. ಹೀಗಾಗಿ, ಯೂರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಪ್ರಭಾವಗಳು ಅದರ ಸಂಸ್ಕೃತಿ, ಅಡುಗೆ ವಿಧಾನ ಹಾಗೂ ವಾಸ್ತುಶಿಲ್ಪವನ್ನು ರೂಪಿಸುವಲ್ಲಿ ತಂತಮ್ಮ ಪಾತ್ರ ವಹಿಸಿವೆ. ಅರಬ್ಬರು, ಫನೀಷಿಯನ್ನರು, ರೋಮನ್ನರು, ತುರ್ಕಿಯ ಒಟ್ಟೋಮಾನ್ ಗಳು ಮತ್ತು ಫ್ರೆಂಚರು ಇವರೆಲ್ಲರೂ ಈ ಸುಂದರ ದೇಶದ ಮೇಲೆ ತಮ್ಮ ಗುರುತು ಮೂಡಿಸಿದ್ದಾರೆ. ಟ್ಯೂನಿಸಿಯಾದ ಭೂಪ್ರದೇಶಗಳು  ಸಮುದ್ರದ ಮರಳದಂಡೆಗಳಿಂದ ಹಿಡಿದು ಉತ್ತರದಲ್ಲಿ ಫಲವತ್ತಾದ ಬಯಲು ಪ್ರದೇಶಗಳು ಹಾಗೂ ಒಳನಾಡಿನಲ್ಲಿ ಅಟ್ಲಾಸ್ ಪರ್ವತಗಳವರೆಗೆ ವಿಭಿನ್ನವಾಗಿವೆ.

ಮೆಡೀನಾದಲ್ಲಿ ಮಿಂಟ್ ಚಹಾ ಹೀರಿದ ಮೇಲೆ ನಾನು ಟ್ಯೂನಿಸಿಯಾದ ವಿವಿಧ ಖಾದ್ಯಗಳ ರುಚಿಯನ್ನು ಮೆಲ್ಲುತ್ತಾ ಕಳೆದುಹೋದೆ. ಅಲ್ಲಿನ ಸಿಹಿ ಖಾದ್ಯಗಳನ್ನು ಹಾಗೂ ಸ್ಥಳೀಯ ಮಾರಾಟಗಾರರೊಬ್ಬರು ಸ್ನೇಹಭಾವದಿಂದ ನೀಡಿದ, ಮಂಜುಗಡ್ಡೆಯಲ್ಲಿ ಇರಿಸಿದ್ದ ಕೊರೆಯುತ್ತಿದ್ದ ಕ್ಯಾಕ್ಟಸ್ ಹಣ್ಣನ್ನು ತಿಂದು ಹುರುಪುಗೊಂಡೆ. ನನ್ನ ಮುಂದಿನ ಪಯಣ ಬಾರ್ಡೋ ಮ್ಯೂಸಿಯಂ ಗೆ ಮುಂದುವರಿಯಿತು. 19ನೇ ಶತಮಾನದ ಅರಮನೆಯಲ್ಲಿರುವ ಈ ವಸ್ತು ಸಂಗ್ರಹಾಲಯವು ಒಂದು ಲಕ್ಷಕ್ಕೂ ಹೆಚ್ಚು ಕಲಾಕೃತಿಗಳ ಸಂಗ್ರಹ ಹೊಂದಿದೆ. ಭವ್ಯವಾದ ರೋಮನ್ ಮೊಜಾಯಿಕ್ಕುಗಳು, ವಿಶಿಷ್ಟ ಆಭರಣಗಳು ಹಾಗೂ ಸೂಕ್ಷ್ಮ ಕುಶಲತೆಯ ಪಿಂಗಾಣಿ ಕಲಾಕೃತಿಗಳು ಇವುಗಳಲ್ಲಿ ಸೇರಿವೆ.

ಟ್ಯೂನಿಸ್ ನಗರ ಹಾಗೂ ಪ್ಯಾರಿಸ್  ನಡುವೆ ಅಚ್ಚರಿ ಎನ್ನಿಸುವಂತಹ ಹೋಲಿಕೆಗಳಿವೆ; ಇಲ್ಲಿನ ಅವಿನ್ಯೂ ದೆ ಫ್ರಾನ್ಸ್ ಗೆ ಕಾಲಿಟ್ಟರೆ ನೀವು ಫ್ರಾನ್ಸ್ ನ ರಾಜಧಾನಿ ನಗರಿಯಲ್ಲೇ ಇದ್ದೀರೇನೋ ಎಂಬ ಭಾವನೆ ಮೂಡುವುದು ಸುಳ್ಳಲ್ಲ! ಅಲ್ಲಿನ ವಿಶಾಲ ಬುಲವಾರ್ಡ್ ಗಳು (ಸಾಲಾಗಿ ಮರಗಳಿರುವ ರಸ್ತೆ), ಭವ್ಯ ಕಟ್ಟಡಗಳು ಹಾಗೂ ಜನರಿಂದ ಗಿಜಿಗುಡುವ ಕೆಫೆಗಳು ಟ್ಯೂನಿಸಿಯಾದ ಚಹರೆಗಳ ನಡುವೆಯೂ ಥಟ್ಟನೆ ಫ್ರೆಂಚ್ ರಾಜಧಾನಿಯನ್ನು ನೆನಪಿಗೆ ತರುವಂತಿವೆ.

ಟ್ಯೂನಿಸ್ ನಿಂದ ನಾನು ರಮಣೀಯ ಹಳ್ಳಿಯಾದ “ಸಿದಿ ಬೂ ಸಾಯಿದ್” ಎಂಬಲ್ಲಿಗೆ ಯಾನ ಕೈಗೊಂಡೆ. ಕಡಿದಾದ ಪರ್ವತದ ತುದಿಯಲ್ಲಿ ಮೆಡಿಟರೇನಿಯನ್ ಸಾಗರವನ್ನು ದಿಟ್ಟಿಸುತ್ತಾ ಬದುಕು ಕಟ್ಟಿಕೊಂಡಿರುವ ಹಳ್ಳಿ ಇದಾಗಿದೆ.  ಬಿಳಿಯ‌ ಸುಣ್ಣ‌‌ದ ಗೋಡೆಗಳ ಕಟ್ಟಡಗಳು ಹಾಗೂ ಅವಕ್ಕೆ ನೀಲಿ ಬಣ್ಣದ ಬಾಗಿಲುಗಳು ಅಥವಾ ಶಟರ್ ಗಳು ಇಲ್ಲಿ ಎದ್ದು ಕಾಣುತ್ತವೆ. ಇಲ್ಲಿನ ಭೂಪ್ರದೇಶಗಳು ಗ್ರೀಸ್ ನ ಸಂತರೀನೀಯ ಭೂ ಪ್ರದೇಶಗಳನ್ನು ನೆನಪಿಸುತ್ತವೆ. ಇಲ್ಲಿನ ಪ್ರತೀತಿಯ ಪ್ರಕಾರ, ಮುಸ್ಲಿಂ ಸಂತನಾಗಿದ್ದ ಸಿದಿ ಬೂ ಸಾಯಿದ್ ನಿಂದಾಗಿ ಈ ಹೆಸರು ಹಳ್ಳಿಗೆ ಬಂದಿದೆ. ಸಿದಿ ಬೂ 12ನೇ ಶತಮಾನದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದನಂತೆ. ಇಲ್ಲಿ ಆಕಾಶದ ಬಣ್ಣವನ್ನು ಹಾಗೂ ಅದೃಷ್ಟವನ್ನು ಸೂಚಿಸಲು ಬಾಗಿಲುಗಳಿಗೆ ಬಹುತೇಕ ಕಡು ನೀಲಿ ಬಣ್ಣವನ್ನೇ ಲೇಪಿಸಲಾಗುತ್ತದೆ. ಮೇಲೆ ಆಗಸದಲ್ಲಿ ತಿಳಿ ನೀಲಿ, ಇಲ್ಲಿ ಈ ಹಳ್ಳಿಯಲ್ಲಿ ಕೆಳಗೆ ಎಲ್ಲೆಲ್ಲೂ ಕಡುನೀಲಿ! ಮನೆಯ ಬಾಗಿಲುಗಳು ಅದರಲ್ಲಿ ವಾಸಿಸುವವರ‌ ಅದೃಷ್ಟವನ್ನು ಮತ್ತು ಸಂತೋಷವನ್ನು ಪ್ರತಿಬಿಂಬಿಸುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ಪಶ್ಚಿಮ ದಿಗಂತದಲ್ಲಿ ಸೂರ್ಯನು ಕರಗುತ್ತಾ ಆಕಾಶಕ್ಕೆ ತಿಳಿ ಗುಲಾಬಿ ಹಾಗೂ ಹೊಂಬಣ್ಣವನ್ನು ಲೇಪಿಸುತ್ತಿದ್ದಾಗ ಒಂದು ಬಗೆಯ ಶಾಂತಿಯ ಭಾವನೆ ಹಾಗೂ ನೆಮ್ಮದಿ  ನನಗೆ ಗೊತ್ತಿಲ್ಲದಂತೆಯೇ ನನ್ನನ್ನು ಆವರಿಸಿತು.‌ ಅಲ್ಲಿನ ಬೀದಿಗಳನ್ನು ಅಲಂಕರಿಸಿದ್ದ ಮಲ್ಲಿಗೆ ಹೂವು ಸುತ್ತಲ ಗಾಳಿಗೆ ಮತ್ತೇರಿಸುವ ಪರಿಮಳ ತುಂಬಿ ಲವಲವಿಕೆಯಿಂದ ನಳನಳಿಸುವ ಹಳ್ಳಿಯ ಪರಿಸರಕ್ಕೆ ತನ್ನ ಪಾಲಿನ ಕೊಡುಗೆ ಎಂಬಂತೆ ಇನ್ನಷ್ಟನ್ನು ಸೇರಿಸಿತ್ತು. ಅಂದಂತೆ, ಮಲ್ಲಿಗೆ ಹೂವು ಟ್ಯೂನಿಸಿಯಾದ ರಾಷ್ಟ್ರೀಯ ಹೂವು ಆಗಿದ್ದು, ಆ ದೇಶದ ಅಸ್ಮಿತೆಯ ಹೆಮ್ಮೆಯ ಸಂಕೇತವಾಗಿದೆ. ಮಲ್ಲಿಗೆ ಕ್ರಾಂತಿ ಎಂದೂ ಹೆಸರಾದ ಟ್ಯೂನಿಸಿಯಾದ ಕ್ರಾಂತಿಯ ಅವಧಿಯಲ್ಲಿಈ ಹೂವು ಆಶಾಭಾವನೆ, ಸ್ವಾತಂತ್ರ್ಯ ಹಾಗೂ ಪರಿವರ್ತನೆಯ ಪ್ರಬಲ ಸಂಕೇತವಾಗಿ ಹೊರಹೊಮ್ಮಿತು. ಪ್ರತಿಭಟನಾಕಾರರು ಮಲ್ಲಿಗೆ ಹೂವುಗಳನ್ನು ಹೊತ್ತು ತಮನ್ನು ತಾವೇ ಮಲ್ಲಿಗೆ ಮಾಲೆಗಳಿಂದ ಸಿಂಗರಿಸಿಕೊಂಡು ರಾಜಕೀಯ ಸುಧಾರಣೆಗಾಗಿ, ಭ್ರಷ್ಟಾಚಾರ ಹಾಗೂ ಸರ್ವಾಧಿಕಾರದ ಆಡಳಿತದ ಪರಿಸಮಾಪ್ತಿಗಾಗಿ ಧ್ವನಿಗಳನ್ನು ಮೊಳಗಿಸಿದ್ದರು.

ನನ್ನ ಅನ್ವೇಷಣೆ ಮುಂದುವರಿಸಿ ನಾನು ಹಮಾಮಟ್ ಎಂಬ ಕಡಲ ದಂಡೆಯ ಪಟ್ಟಣಕ್ಕೆ ಹೊರಟೆ. ಇದು ಪ್ರಶಾಂತ ಸಮುದ್ರ ತೀರಗಳು ಮತ್ತು ತಿಳಿನೀಲಿ ಬಣ್ಣದ ಜಲರಾಶಿಗೆ ಹೆಸರಾಗಿರುವ ತಾಣ. ಕಣ್ಣಿಗೆ ಕಾಣುವಷ್ಟು ಉದ್ದಕ್ಕೂ ಮೈಚೆಲ್ಲಿ ನಿಂತಿರುವ ಮರಳ ದಂಡೆಗಳು ನೋಡುಗರಿಗೆ ಮೆಡಿಟರೇನಿಯನ್ ಸಮುದ್ರದಂಚಿನ ನಿಸರ್ಗ ಸೌಂದರ್ಯದ ನಡುವೆ ಮೈಮರೆತು ವಿರಮಿಸಲು ಆಹ್ವಾನ ನೀಡುವಂತಿವೆ.

ಟ್ಯೂನಿಸಿಯಾ ಪ್ರವಾಸವು  ಅಲ್ಲಿನ ಪುರಾತನ ನಗರವಾದ ಕಾತೆಜ್ ಗೆ ಭೇಟಿ ನೀಡದೆ ಪರಿಪೂರ್ಣವಾಗುವುದೇ ಇಲ್ಲ. ಈ ನಗರವು ಒಂದೊಮ್ಮೆ ಮೆಡಿಟರೇನಿಯನ್ ಪ್ರಾಂತ್ಯದ ವಾಣಿಜ್ಯ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಇಲ್ಲಿ ಸಮೃದ್ಧಿಯಾಗಿ ಬೆಳೆದ ಕಾತೆಜಿನಿಯನ್ ನಾಗರಿಕತೆ ಬಗ್ಗೆ ಇಲ್ಲಿಗೆ ಬಂದಾಗಲೇ ನನಗೆ ಗೊತ್ತಾಗಿದ್ದು. ಪ್ರತೀತಿಗಳ ಪ್ರಕಾರ, ಕಾತೆಜ್ ಸ್ಥಾಪನೆಗೊಂಡಿದ್ದು ರಾಣಿ ಡಿಡೋಳಿಂದ. ಫನೀಷಿಯನ್ ಪೌರಾಣಿಕ ವ್ಯಕ್ತಿಯಾದ ಈಕೆ ಹೊಸ ಸಾಮ್ರಾಜ್ಯ ಹುಡುಕುತ್ತಾ ತನ್ನ ತಾಯ್ನೆಲದಿಂದ ಪಲಾಯನ ಮಾಡಿದಳು. ರಾಜ ತೈರ್ ಎಂಬಾತನ ಮಗಳಾದ ರಾಣಿ ಡಿಡೋ ತನ್ನ ಗಂಡನ ಹತ್ಯೆಯ ನಂತರ ಅನುಯಾಯಿಗಳೊಂದಿಗೆ ಪಲಾಯನ ಮಾಡಿದಳು. ಹಾಗೆ ಬಂದವರು ಉತ್ತರ ಆಫ್ರಿಕಾದಲ್ಲಿ ನೆಲೆಯಾದರು. ಅಲ್ಲಿ ಆಕೆ ಬುದ್ಧಿವಂತಿಕೆಯಿಂದ ವಿಶಾಲ ಪ್ರದೇಶವನ್ನು ರಹಸ್ಯವಾಗಿ ಸುತ್ತುವರಿದು ರಾಜ ಲಾರ್ಬಾಸ್ ನಿಂದ ಭೂಮಿಯನ್ನು ಪಡೆದುಕೊಳ್ಳುತ್ತಾಳೆ. ನಂತರ ಅಲ್ಲಿ ಆಕೆ ಕಾತೆಜ್ ಅನ್ನು ಸ್ಥಾಪಿಸುತ್ತಾಳೆ. ಅದು ಆಕೆಯ ಜಾಣ್ಮೆಯ ನಾಯಕತ್ವದಡಿಯಲ್ಲಿ ಪ್ರಮುಖ ವಾಣಿಜ್ಯ ಹಾಗೂ ವಹಿವಾಟು ನೆಲೆಯಾಗಿ ಪ್ರವರ್ಧಮಾನಕ್ಕೆ ಬರುತ್ತದೆ.

ಟ್ಯೂನಿಸಿಯಾದ ನನ್ನ ಸಂಚಾರವು ಮುಗಿಯುತ್ತಾ ಬಂದಂತೆ ನನ್ನ ಯಾನದ ಉದ್ದಕ್ಕೂ ಆದ ಆಚ್ಚರಿಯ ಅನುಭವಗಳು ಹಾಗೂ ನೆನಪುಗಳನ್ನು ಮೆಲುಕು ಹಾಕದೇ ಇರುವುದು ಅಸಾಧ್ಯವಾಯಿತು. ಟ್ಯೂನಿಸ್ ನ ಗಿಜಿಗುಡುವ ಮಾರ್ಕೆಟ್ ಗಳಿಂದ ಹಿಡಿದು ‌ ಸಿದಿ ಬೂ ಸಾಯಿದ್ ನ ಪ್ರಶಾಂತ ರಮಣೀಯತೆಯವರೆಗೆ ಹಾಗೂ ಕಾತೆಜ್‌ನ ಪುರಾತನ ಅವಶೇಷಗಳವರೆಗೆ ಟ್ಯೂನಿಸಿಯಾವು ನನ್ನ ಹೃದಯವನ್ನು ನಾನು ಊಹಿಸದ ರೀತಿಯಲ್ಲಿ ಸಮ್ಮೋಹನಗೊಳಿಸಿತ್ತು. ವೀಣಾ ವರ್ಲ್ಡ್ ಸಂಸ್ಥೆಯು ಟ್ಯೂನಿಸಿಯಾ, ಮಾಲ್ಟಾ ಮತ್ತು ಸಿಸಿಲಿಯ ಪ್ರಮುಖ ತಾಣಗಳನ್ನು ಅನ್ವೇಷಿಸುವ ಪ್ರವಾಸ ವ್ಯವಸ್ಥೆ ಆರಂಭಿಸಿದೆ. ಇದು ಪ್ರವಾಸಿಗರಿಗೆ ಅದ್ಭುತ ತಾಣಗಳ ಸಮೃದ್ಧ ಇತಿಹಾಸ, ಸಂಸ್ಕೃತಿ ಹಾಗೂ ನೈಸರ್ಗಿಕ ಸೌಂದರ್ಯದಲ್ಲಿ ಮಿಂದೇಳಲು ಅವಕಾಶ ಒದಗಿಸುತ್ತದೆ. ನೀವು ಇತಿಹಾಸದ ಬಗ್ಗೆ ಕುತೂಹಲ ಉಳ್ಳವರಾಗಿರಬಹುದು, ವಿವಿಧ ಸಂಸ್ಕೃತಿಗಳ‌ ಬಗ್ಗೆ ತಿಳಿಯಲು ಉತ್ಸುಕರಾಗಿರಬಹುದು ಅಥವಾ ಕಡಲ ತಡಿಯಲ್ಲಿ ಸ್ವಚ್ಛಂದವಾಗಿ ವಿರಮಿಸುವ ಮನಸ್ಸುಳ್ಳವರಾಗಿರಬಹುದು, ಇವೆಲ್ಲಕ್ಕೂ ಈ ಪ್ರವಾಸವು ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸುತ್ತದೆ. ಈ ಪ್ರವಾಸದ ಸೆಪ್ಟೆಂಬರ್ ತಿಂಗಳ ಬುಕಿಂಗ್ ಈಗಾಗಲೇ ಮುಗಿದು ಹೋಗಿದೆ. ಆದ್ದರಿಂದ, ನಾವು ಅಕ್ಟೋಬರ್ ನಲ್ಲಿ ಇನ್ನೊಂದು ಪ್ರವಾಸ ವ್ಯವಸ್ಥೆ ಏರ್ಪಡಿಸಿದ್ದು, ಅದಕ್ಕೆ ಈಗ ಬುಕಿಂಗ್ ನಡೆಯುತ್ತಿದೆ.

ಪ್ರತಿವಾರವೂ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುನೀಲಾ ಪಾಟೀಲ್, ವೀಣಾ ಪಾಟೀಲ್ ಮತ್ತು ನೀಲ್ ಪಾಟೀಲ್ ಅವರ ಲೇಖನಗಳನ್ನು ವೀಣಾ ವರ್ಲ್ಡ್ ವೆಬ್ಸೈಟ್ www.veenaworld.comನಲ್ಲೂ ಓದಬಹುದು.

August 31, 2024

Author

Sunila Patil
Sunila Patil

Sunila Patil, the founder and Chief Product Officer at Veena World, holds a master's degree in physiotherapy. She proudly served as India's first and only Aussie Specialist Ambassador, bringing her extensive expertise to the realm of travel. With a remarkable journey, she has explored all seven continents, including Antarctica, spanning over 80 countries. Here's sharing the best moments from her extensive travels. Through her insightful writing, she gives readers a fascinating look into her experiences.

More Blogs by Sunila Patil

Please let me know your thoughts on this story by leaving a comment.

Post your Comment

Please let us know your thoughts on this story by leaving a comment.

Similar Romantic Blogs

Read all
insert similar tours here

Explore Topics, Tips & Stories

Balloon
Arrow
Arrow

Get in touch with us

Share your details for a call back and subscribe to our newsletter for travel inspiration.

+91

Listen to our Travel Stories

Most Commented

Veena World tour reviews

What are you waiting for? Chalo Bag Bharo Nikal Pado!

Scroll to Top