Published in the Sunday Vijay Karnataka on 20 July 2025
ಯಾವುದೇ ಮಳಿಗೆಯ ಒಳಹೋಗುತ್ತಿದ್ದಂತೆ ಸುಧೀರ್ ಯಾವುದಾದರೊಂದು ಬುದ್ಧನ ಮೂರ್ತಿಯನ್ನು ನೋಡಿ, “ಇದು ಚೆನ್ನಾಗಿದೆ, ಅಲ್ವಾ?” ಎನ್ನುತ್ತಿದ್ದರು. ಅವರು ಹಾಗೆ ತೋರಿಸಿದ ಪ್ರತಿಯೊಂದು ಮೂರ್ತಿಯಲ್ಲೂ ನಾನು ಏನಾದರೊಂದು ಊನವನ್ನು ಹುಡುಕಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದೆ.
ನಮ್ಮ ವಿಯೆಟ್ನಾಂ ಪ್ರವಾಸ ಇನ್ನೇನು ಮುಗಿಯಲು ಬಂದಿದ್ದರೂ ನನಗಿನ್ನೂ ಒಪ್ಪಿಗೆಯಾಗುವಂತಹ ಬೂಡೈ ಮೂರ್ತಿ, ಅಂದರೆ ಬುದ್ಧನ ಮಂದಸ್ಮಿತ ಮೂರ್ತಿ ಎಲ್ಲೂ ಸಿಕ್ಕಿರಲಿಲ್ಲ. ಆ ದೇಶದ ಉದ್ದಗಲಕ್ಕೂ ಬುದ್ಧನ ಬೃಹತ್ ಮೂರ್ತಿಗಳನ್ನು ಸಾಕಷ್ಟು ನೋಡಿದ್ದ ನಾನು, ನಮ್ಮ ಮನೆಗೆ ಅದೇ ಥರದ ಪುಟ್ಟ ಪ್ರತಿಕೃತಿಯೊಂದನ್ನು ತರಲು ನಿರ್ಧರಿಸಿದ್ದೆ. ನನಗೆ ಎಂತಹ ಮೂರ್ತಿ ಬೇಕೆಂಬ ಬಗ್ಗೆ ಸ್ಪಷ್ಟ ಕಲ್ಪನೆ ಇತ್ತು: ಮೂರ್ತಿಯು 10 ಇಂಚುಗಳಿಗಿಂತ ಕಡಿಮೆ ಉದ್ದವಿರಬೇಕು (ಅದನ್ನು ಮನೆಯಲ್ಲಿ ಯಾವ ಜಾಗದಲ್ಲಿ ಇಡಬೇಕು ಎಂಬುದನ್ನೂ ನಿಗದಿಪಡಿಸಿಕೊಂಡಿದ್ದೆ), ಅದನ್ನು ಇರಿಸಬೇಕೆಂದುಕೊಂಡಿರುವ ಸ್ಥಳದ ಹಿನ್ನೆಲೆಯಲ್ಲಿ ನೀಲಿ ಬಣ್ಣವಿರುವುದರಿಂದ ಮೂರ್ತಿಯು ಬಿಳಿ ಬಣ್ಣದ್ದಾಗಿದ್ದು ಅದರಲ್ಲಿ ಕೆಂಪು, ಹಸಿರು ಅಥವಾ ಹಳದಿ ಛಾಯೆಗಳಿರಬೇಕು ಎಂದುಕೊಂಡು ಅಂತಹ ಮೂರ್ತಿಗಾಗಿ ಹುಡುಕುತ್ತಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ, ಮೂರ್ತಿಯು ನೈಜವಾದ ಮಂದಸ್ಮಿತ ಮುಖಭಾವದಿಂದ ಕೂಡಿದ್ದು, ನೋಡುವವರಿಗೆ ತಮ್ಮನ್ನೇ ಬರಮಾಡಿಕೊಳ್ಳಲು ಕಾದು ನಿಂತಿದೆಯೇನೋ ಎನ್ನಿಸುವಂತಿರಬೇಕು ಎಂಬುದು ನನ್ನ ಬಯಕೆಯಾಗಿತ್ತು.
ನಮ್ಮ 10 ದಿನಗಳ ಪ್ರವಾಸದಲ್ಲಿ ಅಂತಹ ಬುದ್ಧನ ಮೂರ್ತಿಯು ಲಭ್ಯವಾಗಬಹುದೆಂಬ ಆಶೆಯಲ್ಲಿ ನಾವು ಸ್ಮರಣಿಕೆಯ ಹಲವಾರು ಮಳಿಗೆಗಳಿಗೆ ಎಡತಾಕಿದೆವು. ಆದರೆ ನನ್ನ ಕಲ್ಪನೆಯಲ್ಲಿದ್ದ, ದುಂಡುದುಂಡಾಗಿರುವ, ಸುಂದರವಾದ, ಮಂದಸ್ಮಿತ ಪುಟಾಣಿ ಮೂರ್ತಿ ಮರೀಚಿಕೆಯಾಗಿಯೇ ಉಳಿದಿತ್ತು. ಇದರಿಂದ ಹತಾಶೆಗೊಂಡು ಸುಧೀರ್ ಅದಾಗಲೇ ಹುಡುಕುವ ಪ್ರಯತ್ನವನ್ನೇ ಕೈಬಿಟ್ಟಾಗಿತ್ತು. ಯಾವುದೇ ಮಳಿಗೆಯ ಒಳಹೋಗುತ್ತಿದ್ದಂತೆ ಸುಧೀರ್ ಯಾವುದಾದರೊಂದು ಬುದ್ಧನ ಮೂರ್ತಿಯನ್ನು ನೋಡಿ, “ಇದು ಚೆನ್ನಾಗಿದೆ, ಅಲ್ವಾ?” ಎನ್ನುತ್ತಿದ್ದರು. ಅವರು ಹಾಗೆ ತೋರಿಸಿದ ಪ್ರತಿಯೊಂದು ಮೂರ್ತಿಯಲ್ಲೂ ನಾನು ಏನಾದರೊಂದು ಊನವನ್ನು ಹುಡುಕಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದೆ.
ಹೀಗಿರುವಾಗ, ಈ ಘಟನೆ ಸಂಭವಿಸಿತು: ಅದು ಹೋ ಚಿ ಮಿನ್ ನಗರದಲ್ಲಿ ನಮ್ಮ ಕೊನೆಯ ಸಂಜೆಯಾಗಿತ್ತು. ಅಲ್ಲಿನ ನಿಬಿಡ ಚಟುವಟಿಕೆಗಳ ತಾಣವಾದ ನ್ಯೂಯೆನ್ ಹ್ಯೂ ವಾಕಿಂಗ್ ಸ್ಟ್ರೀಟ್‌ನಲ್ಲಿ ಅಡ್ಡಾಡುತ್ತಿದ್ದೆವು. ನನ್ನ ಮನಸ್ಸಿನಾಳದಲ್ಲಿ ಹತಾಶೆ ಕಾಡುತ್ತಿತ್ತಾದರೂ ಅದನ್ನು ಕಾಣಗೊಡದೆ ಖುಷಿಯಿಂದಲೇ ಇರುವಂತೆ ತೋರಿಸಿಕೊಳ್ಳುತ್ತಿದ್ದೆ. ಅಂತಹ ಪರಿಸ್ಥಿತಿಯಲ್ಲಿ ಸುಧೀರ್, “ಈ ಪರಿಯ ಚಿಂತೆ ಏಕೆ? ಒಂದು ಸಣ್ಣ ರಾಜಿ ಮಾಡಿಕೊಂಡಿದ್ದರೆ ಬೇಸರವೇ ಆಗುತ್ತಿರಲಿಲ್ಲ!” ಎಂದರು. ಅವರು ಹೀಗೆಂದ ಮೇಲೆ ಬುದ್ಧನ ಮೂರ್ತಿಯ ಹುಡುಕಾಟವನ್ನು ಸದ್ದಿಲ್ಲದೇ ಕೈಬಿಟ್ಟು, “ಈಗಿನ ಕ್ಷಣಗಳನ್ನು ಖುಷಿಯಿಂದ ಅನುಭವಿಸೋಣ” ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ.
ಆ ರಸ್ತೆಯಲ್ಲಿ ಹಬ್ಬದಂತಹ ಜೀವನೋತ್ಸಾಹ ತುಳುಕುತ್ತಿತ್ತು. ನೃತ್ಯಗಾರರು, ವಿವಿಧ ಕಾರ್ಯಕ್ರಮಗಳ ಪ್ರದರ್ಶನಕಾರರು ಹಾಗೂ ಪ್ರವಾಸಿಗರು ಪಾರ್ಟಿ ಪೋಷಾಕುಗಳಲ್ಲಿ ಗಮನ ಸೆಳೆಯುತ್ತಿದ್ದರು. ಅವೆಲ್ಲವನ್ನೂ ನೋಡುವುದರಲ್ಲಿ ಮಗ್ನವಾಗಿ ಒಂದಷ್ಟು ಫೋಟೊಗಳನ್ನೂ ಸೆರೆಹಿಡಿದೆವು. “ವಿಯೆಟ್ನಾಂನಲ್ಲಿರುವಾಗ ವಿಯೆಟ್ನಾಮೀಯರು ಮಾಡುವಂತೆಯೇ ಮಾಡು” ಎಂಬುದನ್ನು ಅನುಸರಿಸಿದೆವು. ಆ ರಸ್ತೆಯಲ್ಲಿನ ಚಟುವಟಿಕೆಗಳು ನಮ್ಮಲ್ಲಿ ಹುರುಪು ಮೂಡಿಸಿ ಆ ದಿನದ ಸಂಜೆಯನ್ನು ಮುದಗೊಳಿಸಿದವು.
ನಾವು ಇನ್ನೇನು ವಾಪಸ್ ಹೊರಡಬೇಕೆಂದುಕೊಳ್ಳುತ್ತಿರುವಾಗ ಸ್ವಲ್ಪ ದೂರ ನಡೆದು ಸಾಗೋಣವೆನ್ನಿಸಿತು. “ನಾಳೆ ವಿಮಾನದಲ್ಲೇ ವಿಶ್ರಾಂತಿ ತೆಗೆದುಕೊಂಡರಾಯಿತು” ಎಂದುಕೊಂಡ ನಮಗೆ ಕಡೆಯ ದಿನದ ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಅನುಭವಿಸುವ ಹಂಬಲವಾಯಿತು. ಆಗ ಬಲಭಾಗದಲ್ಲೊಂದು ದೊಡ್ಡ ಪುಸ್ತಕದಂಗಡಿ ನಮ್ಮ ಕಣ್ಣಿಗೆಬಿತ್ತು. ಆ ಅಂಗಡಿ ನಮ್ಮನ್ನೇ ಕರೆಯುತ್ತಿದೆಯೇನೋ ಅನ್ನಿಸಿತು. ಮೊದಲೇ ನಮ್ಮಿಬ್ಬರಿಗೂ ಪುಸ್ತಕದಂಗಡಿ ಹಾಗೂ ಸ್ಟೇಷನರಿ ಮುಂಗಟ್ಟುಗಳೆಂದರೆ ಒಂದು ಬಗೆಯ ದೌರ್ಬಲ್ಯ. ಮರುದಿನ ವಿಮಾನದಲ್ಲಿ ಓದಲು ಯಾವುದಾದರೂ ಪುಸ್ತಕ ಸಿಗಬಹುದು ಹಾಗೂ ನಮ್ಮಲ್ಲಿ ಉಳಿದಿದ್ದ ವಿಯೆಟ್ನಾಂ ಕರೆನ್ಸಿ ಡಾಂಗ್ ಅನ್ನು ಸ್ವಲ್ಪ ಖರ್ಚು ಮಾಡೋಣ ಎಂದುಕೊಂಡು ಒಳಹೊಕ್ಕೆವು.
ಇಂತಹ ಪುಸ್ತಕದಂಗಡಿಗಳು ಸ್ಥಳೀಯ ಬದುಕಿನ ಬಗ್ಗೆ ಇಣುಕು ನೋಟವನ್ನು ನೀಡುತ್ತವೆ. ನಿತ್ಯ ಬಳಕೆಯ ವಸ್ತುಗಳು, ಹಬ್ಬದ ಆಲಂಕಾರಿಕ ವಸ್ತುಗಳು, ನೋಟ್ ಪುಸ್ತಕಗಳು ಹಾಗೂ ಆಯಾ ನೆಲದ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲಾಕೃತಿಗಳು ಅಲ್ಲಿದ್ದವು. ಅಂಗಡಿಯನ್ನು ಸುತ್ತು ಹಾಕುತ್ತಾ ಅಲ್ಲಿನ ಮೂಲೆಗಳ ಮೇಲೆಲ್ಲಾ ಕಣ್ಣಾಡಿಸುತ್ತಿರುವಾಗ ಇದ್ದಕ್ಕಿದ್ದಂತೆ ಕಣ್ಣಿಗೆಬಿತ್ತು ನೋಡಿ!
ಶ್ವೇತವಸ್ತ್ರಧಾರಿ ತಿಳಿನಗೆಯ ಬುದ್ಧನ ಮೂರ್ತಿ ಅದಾಗಿತ್ತು. ನನ್ನ ಅದೃಷ್ಟಕ್ಕೆ ಅದು ಪಿಂಗಾಣಿಯದ್ದಾಗಿರಲಿಲ್ಲ. ಅದರ ಎತ್ತರ ಸಹ 10 ಇಂಚುಗಳಿಗಿಂತ ಕಡಿಮೆಯೇ ಇತ್ತು. ನನಗಾದ ಖುಷಿ ಅಷ್ಟಿಷ್ಟಲ್ಲ. “ನೀವು ಹೃದಯಾಂತರಾಳದಿಂದ ಏನನ್ನಾದರೂ ಬಯಸಿದರೆ, ಇಡೀ ಬ್ರಹ್ಮಾಂಡವೇ ನಿಮ್ಮೊಂದಿಗೆ ಕೈಜೋಡಿಸಿ ಅದನ್ನು ಆಗಗೊಡುತ್ತದೆ” ಎಂಬುದನ್ನು ಸಾರುವ ಬಾಲಿವುಡ್ ಚಿತ್ರದ ಸನ್ನಿವೇಶವೇ ಮರುಸೃಷ್ಟಿ ಆಗಿದೆಯೇನೋ ಅನ್ನಿಸಿತು. ಆ ಉಲ್ಲೇಖದ ಬಗೆಗಿನ ನನ್ನ ನಂಬಿಕೆಯು ಮತ್ತೊಮ್ಮೆ ದೃಢಪಟ್ಟ ಕ್ಷಣ ಅದಾಗಿತ್ತು.
ಆ ಬುದ್ಧನ ಮೂರ್ತಿಯನ್ನು ಅಲ್ಲಿ ಕೊಂಡುಕೊಂಡೆವು. ಈಗ ಆ ಮೂರ್ತಿಯು ನಮ್ಮ ಮನೆಯಲ್ಲಿ ನಾನು ಎಲ್ಲಿ ಇಡಬೇಕೆಂದುಕೊಂಡಿದ್ದೆನೋ ಆ ಜಾಗದಲ್ಲಿ ವಿರಾಜಮಾನವಾಗಿದೆ. ನೋಡಿದಾಗಲೆಲ್ಲಾ ನೆನಪುಗಳನ್ನು ಅನಾವರಣಗೊಳಿಸುವ ಆ ಮೂರ್ತಿಯು ಹಸನ್ಮುಖದಿಂದ ಇರಲು ನಮಗೆ ಸೂಚಿಸುತ್ತಿರುವಂತೆಯೂ ಭಾಸವಾಗುತ್ತದೆ.
ಒಂದಷ್ಟು ವರ್ಷಗಳ ಹಿಂದೆ ಪ್ರತಿಯೊಂದು ಮನೆಯಲ್ಲೂ ಷೋಕೇಸ್ ಇರುತ್ತಿತ್ತು. ಅದರೊಳಗಿನ ವಸ್ತುಗಳನ್ನು ದೂಳಿನಿಂದ ರಕ್ಷಿಸಲು ಸ್ಲೈಡಿಂಗ್ ಡೋರ್ ಇರುತ್ತಿತ್ತು. ಪ್ರವಾಸದ ವೇಳೆ ತಂದ ಸ್ಮರಣಿಕೆಗಳನ್ನು ಅದರೊಳಗೆ ಜೋಪಾನವಾಗಿ ಇರಿಸಲಾಗಿರುತ್ತಿತ್ತು. ಷೋಕೇಸಿನೊಳಗೆ ಇರಿಸಿದ ವಸ್ತುಗಳಿಗೆ ತಳುಕು ಹಾಕಿಕೊಂಡ ಕತೆಗಳನ್ನು ಅಪ್ಪ– ಅಮ್ಮ ಅಥವಾ ಅಜ್ಜ– ಅಜ್ಜಿ ಮನೆಗೆ ಬಂದವರೊಂದಿಗೆ ಹಂಚಿಕೊಳ್ಳುತ್ತಿದ್ದರು. ಅಂತಹ ಷೋಕೇಸ್ಅ ನ್ನು ಸ್ವಚ್ಛಗೊಳಿಸುವುದೇ ಒಂದು ಧಾರ್ಮಿಕ ವಿಧಿಯ ರೀತಿ ಇರುತ್ತಿತ್ತು. ಒಂದು ವೇಳೆ ಹೀಗೆ ಸ್ವಚ್ಛಗೊಳಿಸುವಾಗ ಅದರೊಳಗಿನ ವಸ್ತುವೇನಾದರೂ ಒಡೆದುಹೋಗಿಬಿಟ್ಟರೆ ಮನೆಯಲ್ಲಿ ಭಾವುಕ ಸನ್ನಿವೇಶವೇ ಸೃಷ್ಟಿಯಾಗಿಬಿಡುತ್ತಿತ್ತು! ಎಲ್ಲವೂ ಸರಿ, ಆದರೆ ಈ ಷೋಕೇಸಿನ ಗಾಜಿನ ಬಾಗಿಲುಗಳು ಅದೇಕೆ ಅಷ್ಟೊಂದು ಬಿಗಿಯಾಗಿರಬೇಕು ಎಂಬುದು ನನ್ನ ತಕರಾರಾಗಿತ್ತು.
ಕಾಲ ಕಳೆದಂತೆ ಸ್ಲೈಡಿಂಗ್ ಡೋರಿಗೆ ಬದಲಾಗಿ ತಿರುಗಣೆ ಬಾಗಿಲು (ಕೀಲು ಬಾಗಿಲು) ಬಂತು. ತದನಂತರ ಷೋಕೇಸ್ ಇರುವುದೇ ಓಬೀರಾಯನ ಕಾಲದ ಪರಿಕಲ್ಪನೆ ಎಂದು ವಾಸ್ತುಶಿಲ್ಪಿಗಳ ಒಂದು ವರ್ಗ ಹೇಳತೊಡಗಿತು. ಆಗ ತೆರೆದ ಷೆಲ್ಫ್ ಗಳಲ್ಲಿ ಬೆಲೆಬಾಳುವ ಕಲಾಕೃತಿಗಳನ್ನು ಇಡುವ ಪ್ರವೃತ್ತಿ ಬೆಳೆಯಿತು. ಆದರೆ ಯಾವುದೇ ಆಸಕ್ತಿಕರ ಕತೆಯ ಹಿನ್ನೆಲೆಯಿರದ, ಕೇವಲ ಪ್ರದರ್ಶನಕ್ಕೆಂದೇ ಷೋಪೀಸ್‌ಗಳನ್ನು ತಂದಿರಿಸಲಾಗುತ್ತಿದ್ದ ಪದ್ಧತಿಯು ಕ್ರಮೇಣ ಜನಪ್ರಿಯತೆ ಕಳೆದುಕೊಂಡಿತು.
ಅದಾದ ಮೇಲೆ, ‘ಮಿನಿಮಲಿಸಂ’ ಪ್ರತಿಪಾದನೆ ಬೆಳೆಯಿತು. ವಸ್ತುಗಳು ಎಷ್ಟು ಕಡಿಮೆ ಇರುತ್ತವೆಯೋ ಬದುಕು ಅಷ್ಟು ಉತ್ತಮವಾಗಿರುತ್ತದೆ ಎಂಬುದನ್ನು ನಂಬುವ ತತ್ತ್ವವಿದು. ಹೀಗೆ ಬದಲಾದ ಪ್ರವೃತ್ತಿಗಳ ನಡುವೆಯೇ ನಮ್ಮ ಪ್ರವಾಸಗಳು ಮುಂದುವರಿದಿದ್ದವು. ಪ್ರತಿಯೊಂದು ನಗರ ಮತ್ತು ದೇಶವು ಏನಾದರೊಂದು ವಸ್ತುವನ್ನು ಹಾಗೂ ನಮ್ಮ ಮನೆಗೆ ವಿಶೇಷ ಎನ್ನಿಸುವಂಥದ್ದನ್ನು ಸೇರ್ಪಡೆಗೊಳಿಸುತ್ತಲೇ ಹೋಯಿತು.
“ಇನ್ನು ಸ್ಮರಣಿಕೆಗಳನ್ನು ಕೊಂಡುಕೊಳ್ಳುವುದನ್ನು ನಿಲ್ಲಿಸಿಬಿಡೋಣ” ಎಂದು ನಾವು ಎಂದಿಗೂ ಅಂದುಕೊಳ್ಳಲೇ ಇಲ್ಲ. “ನಾವು ಹೇಗೆ ತಾನೇ ಹಾಗೆ ಹೇಳಲು ಸಾಧ್ಯ?” ನಾವು ತಂದ ಪ್ರತಿಯೊಂದು ವಸ್ತುವೂ ಒಂದು ಕತೆಯನ್ನು, ನಾವು ಭೇಟಿ ಕೊಟ್ಟ ಸ್ಥಳದ ತುಣುಕನ್ನು ಹೊತ್ತಿರುತ್ತಿತ್ತು. ನನಗೆ ಇಂದು ಹಸನ್ಮುಖ ಬುದ್ಧನ ಬಗ್ಗೆ ಬರೆಯುತ್ತಿರುವಾಗ ಕಳೆದ ವರ್ಷದ ವಿಯೆಟ್ನಾಂ ಪ್ರವಾಸದ ನೆನಪು ಒತ್ತರಿಸಿ ಬರುತ್ತಿರುವ ರೀತಿಯಲ್ಲೇ ಪ್ರತಿಯೊಂದು ವಸ್ತುವೂ ನೆನಪುಗಳ ಬುತ್ತಿಯನ್ನು ತುಳುಕಿಸುತ್ತದೆ. ಅಷ್ಟಕ್ಕೂ ಬದುಕು ಎಂದರೆ ಸುಂದರ ನೆನಪುಗಳ ಕ್ರೋಡೀಕರಣವೇ ಹೌದಲ್ಲವೇ.
ಹಾಗಾದರೆ ಈ ಎಲ್ಲಾ ಸ್ಮರಣಿಕೆಗಳೊಂದಿಗೆ ಏನು ಮಾಡುವುದು? ನಾವು ‘ಮಿನಿಮಲಿಸಂ’ ಅನ್ನು ಒಂದಷ್ಟು ಮರೆತು ಬುಕ್ ಷೆಲ್ಫ್ ಕಮ್-ಷೋಕೇಸ್ ಒಂದನ್ನು ರೂಪಿಸಿದೆವು. ಈಗ ನಮ್ಮ ಪ್ರವಾಸದ ವೇಳೆ ಕೊಂಡು ತಂದ ಸ್ಮರಣಿಕೆಗಳು ಅದರ ತೆರೆದ ಷೆಲ್ಫ್‌ಗಳಲ್ಲಿ ಕುಳಿತಿವೆ. ನಾನು ಒಬ್ಬನೇ ಇರುವ ಸಂದರ್ಭಗಳಲ್ಲಿ ಅಥವಾ ಸ್ವಲ್ಪ ಉತ್ಸಾಹ ಕುಂದಿದ ವೇಳೆಯಲ್ಲಿ ಅದರ ಮುಂದೆ ಕುಳಿತು, ಅಲ್ಲಿರುವ ಪ್ರತಿ ವಸ್ತುವಿನ ಹಿಂದಿರುವ ಕತೆಯನ್ನೂ ನೆನಪಿಸಿಕೊಳ್ಳುತ್ತೇನೆ. ಹೀಗೆ ಹಳೆಯದನ್ನು ಮೆಲುಕು ಹಾಕುವುದು ನನಗೆ ಓಟಿಟಿ ಪ್ಲ್ಯಾಟ್‌ಫಾರ್ಮ್‌ಗಿಂತ ಮಿಗಿಲಾದ ಸ್ಫೂರ್ತಿಯನ್ನು ತುಂಬುತ್ತದೆ. ನಮ್ಮ ಸಹೋದ್ಯೋಗಿ ರೋಷನಿ ಬಾಗ್ವೆ ಅವರಿಗೆ ಫ್ರಿಡ್ಜ್ ಮ್ಯಾಗ್ನೆಟ್‌ಗಳೆಂದರೆ ಬಹಳ ಇಷ್ಟ. ಅವರು ಬೇರೆ ಬೇರೆ ದೇಶಗಳು ಹಾಗೂ ನಗರಗಳಿಂದ ತಂದು ಬಹಳಷ್ಟು ಮಾಗ್ನೆಟ್‌ಗಳನ್ನು ಸಂಗ್ರಹಿಸಿದ್ದಾರೆ. ಅವರ ಪಾಲಿಗೆ ಅದೊಂದು ಪ್ರವಾಸದ ಪುರಾವೆಯೇ ಸರಿ. ಒಂದು ದಿನ ಆಕೆ ನಮ್ಮ ಕಚೇರಿಯ ಹೆಚ್ಆರ್ ಅವರನ್ನು ಕಂಡು, “ದಯವಿಟ್ಟು ನನಗೊಂದು ಮ್ಯಾಗ್ನೆಟಿಕ್ ಫಲಕ ಕೊಡಿ. ನನ್ನ ಅಯಸ್ಕಾಂತಗಳ ಸಂಗ್ರಹವನ್ನು ಕಚೇರಿಗೆ ಕೊಡುಗೆಯಾಗಿ ನೀಡಬೇಕೆಂದುಕೊಂಡಿದ್ದೇನೆ” ಎಂದು ಕೋರಿದರು. ಅದಕ್ಕೆ ಹೆಚ್ಆರ್ ಸಂತೋಷದಿಂದ ಸಮ್ಮತಿಸಿದರು. ಈಗ ಆಕೆ ನೀಡಿದ ಸಂಗ್ರಹವು ಕಚೇರಿಯ ಗೋಡೆಯ ಮೇಲೆ ರಾರಾಜಿಸುತ್ತಿದೆ.
ನನಗೂ ಇತ್ತೀಚೆಗೆ ಫ್ರಿಡ್ಜ್ ಮ್ಯಾಗ್ನೆಟ್ ಸೆಳೆತ ಅಂಟಿಕೊಂಡಿದೆ. ಭೇಟಿ ನೀಡಿದ ಪ್ರತಿ ಸ್ಥಳದಿಂದಲೂ ಮ್ಯಾಗ್ನೆಟ್ ತಂದು ಆ ಫಲಕಕ್ಕೆ ಸೇರಿಸುತ್ತಿದ್ದೇನೆ. ಇನ್ನು, ಇತ್ತೀಚೆಗೆ ನಮ್ಮ ಟೂರ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಇನ್ನೊಂದು ಬೋರ್ಡ್ ಅನ್ನೂ ನಾನು ನೋಡಿದೆ. ಅದರ ತುಂಬಾ ವಿವಿಧ ದೇಶಗಳಿಂದ ತಂದಿರುಚ ಕೀಚೈನ್‌ಗಳು ತುಂಬಿವೆ. ನಾನು ರಾಜೀವ್, ಶ್ರೀಕೃಷ್ಣ ಮತ್ತು ಸಂದೀಪ್ ಅವರನ್ನು ಆ ಬಗ್ಗೆ ಕೇಳಿದಾಗ, “ಪ್ರತಿಯೊಂದು ಹೊಸ ದೇಶಕ್ಕೆ ಹೋದಾಗಲೂ ಟೂರ್ ಮ್ಯಾನೇಜರುಗಳು ನೆನಪಿನ ಕುರುಹಾಗಿ ಕೀಚೈನ್ ಒಂದನ್ನು ತರುತ್ತಾರೆ” ಎಂದು ತಿಳಿಸಿದರು.
ಅದ್ಭುತ! ನೆನಪಿನ ಕುರುಹುಗಳಾಗಿ ಕೀಚೈನುಗಳು!
ಹೌದಲ್ಲವೇ, ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೆಲ್ಲರೂ ಕಟ್ಟುತ್ತಿರುವುದು ಅಂತಹ ನೆನಪುಗಳ ಸಂಗ್ರಹವನ್ನೇ ಅಲ್ಲವೇ ಎಂದು ನನಗೆ ಅನ್ನಿಸಿತು.
ಹಳೆಯ ಡೈರಿಗಳು, ಹಳೆಯ ಪುಸ್ತಕಗಳು ಅಥವಾ ಅವಧಿ ತೀರಿದ ಪಾಸ್‌ಪೋರ್ಟ್ ಪುಟಗಳನ್ನು ತಿರುವಿ ಹಾಕುವ ಅಭ್ಯಾಸವು ನಮ್ಮನ್ನು ಹಳೆಯ ನೆನಪುಗಳ ಲೋಕಕ್ಕೆ ಕೊಂಡೊಯ್ಯಬಲ್ಲದು. ಇದೇ ಸಂದರ್ಭದಲ್ಲಿ, ನಮ್ಮ ಹಲವಾರು ಕಚೇರಿಗಳ ಗೋಡೆಗಳ ಮೇಲೆ ಕಂಡುಬರುವ ಉಲ್ಲೇಖವೊಂದು ನೆನಪಾಗುತ್ತಿದೆ:
“ಪ್ರಪಂಚದಲ್ಲಿರುವ ಎಲ್ಲಾ ಪುಸ್ತಕಗಳ ಪೈಕಿ ಅತ್ಯಂತ ಸುಂದರವಾದ ಕತೆಗಳು ಪಾಸ್‌ಪೋರ್ಟ್ ಪುಸ್ತಕದ ಹಾಳೆಗಳ ಮಧ್ಯೆ ಇರುತ್ತವೆ”- ಎಂಬುದೇ ಆ ಉಲ್ಲೇಖವಾಗಿದೆ.
ಹೌದು, ಅದೆಷ್ಟು ನಿಜ. ಪಾಸ್‌ಪೋರ್ಟ್ ಪುಸ್ತಕದಲ್ಲಿನ ಪ್ರತಿ ಮುದ್ರೆಯೂ ಏನಾದರೊಂದು ಕತೆಯನ್ನು ಉಲಿಯುತ್ತದೆ. ಎಂದಾದರೊಂದು ದಿನ ಬಿಡುವು ಮಾಡಿಕೊಂಡು ನಿಮ್ಮ ಪಾಸ್‌ಪೋರ್ಟ್ ತೆರೆದು ನೋಡಿ. ಅದು ಹೊತ್ತು ತರುವ ನೆನಪುಗಳು ನಿಮ್ಮಲ್ಲಿ ಅಚ್ಚರಿ ಮೂಡಿಸುತ್ತವೆ.
ನಮ್ಮ ಬದುಕು ಮಧುರ ನೆನಪುಗಳಿಂದ ತುಂಬಿರಬೇಕೆಂದರೆ ನಾವು ಪ್ರತಿ ಕ್ಷಣವನ್ನೂ ಜೀವಂತಿಕೆಯಿಂದ, ಪರಿಪೂರ್ಣವೆನ್ನಿಸುವ ರೀತಿಯಲ್ಲಿ ಬದುಕಬೇಕು. ನಾವು ಇಂದು ಏನನ್ನು ಮಾಡುತ್ತೇವೆಯೋ ಅದು ನಾಳೆಯ ನೆನಪಾಗುತ್ತದೆ.
ಆದ್ದರಿಂದ ಮಧುರ ನೆನಪುಗಳನ್ನು ಸೃಷ್ಟಿಸಿಕೊಳ್ಳೋಣ.
Post your Comment
Please let us know your thoughts on this story by leaving a comment.